ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್ ಮತ್ತು ಪ್ರಗ್ಯಾನ್ ಓಜಾ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹ ಹಾಗೂ ವಿಶಿಷ್ಟವಾಗಿ ಆಚರಿಸಿದ್ದಾರೆ. ಕ್ರಿಕೆಟಿಗ ಹಾಗು ರಾಜಕಾರಣಿ ಗೌತಮ್ ಗಂಭೀರ್ ಪ್ರಾಣಾಯಾಮ ಅಭ್ಯಾಸ ಮಾಡುತ್ತಿರುವ ಎರಡು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶೀರ್ಶಾಸನ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿದರೆ, ಪ್ರಗ್ಯಾನ್ ಓಜಾ ಅವರು ವೃಕ್ಷಾಸನ (ಮರದ ಭಂಗಿ) ಮಾಡುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಕ್ಷಿಯಾದರು. "ಯೋಗ ದೇಹ ಮತ್ತು ಮನಸ್ಸಿನ ನಡುವಿನ ಟೀಮ್ ವರ್ಕ್ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ನೆಚ್ಚಿನ ಯೋಗಾಸನ ಯಾವುದು ತಿಳಿಸಿ" ಎಂದು ಸಚಿನ್ ತಮ್ಮ ವ್ಯಾಯಾಮದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ನಿಮಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು" ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಶೀರ್ಶಾಸನದ ವಿಡಿಯೋ ಜೊತೆಗೆ ಶೀರ್ಷಿಕೆ ಬರೆದಿದ್ದಾರೆ.
ವಿಶಿಷ್ಟ ರೀತಿಯಲ್ಲಿ ಯೋಗ ದಿನ ಆಚರಿಸಿದ ಪ್ರಗ್ಯಾನ್ ಓಜಾ, "ಯೋಗಕ್ಕೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುವ ಶಕ್ತಿ ಇದೆ. ಯೋಗ ಮಾಡುವುದರಿಂದ ಒತ್ತಡವನ್ನು ದೂರ ಮಾಡಬಹುದು. ಶಾಂತಿ, ಸಹನೆ, ನೆಮ್ಮದಿಗಾಗಿ ಯೋಗ ತುಂಬಾ ಉಪಯುಕ್ತ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಯೋಗದ ಶಕ್ತಿಯನ್ನು ಬಳಸಿಕೊಳ್ಳುವುದು" ಎಂದು ಶೀರ್ಷಿಕೆ ಬರೆದಿದ್ದಾರೆ. "ಯೋಗವು ದೇಹವನ್ನು ಮಾತ್ರವಲ್ಲ, ಮನಸ್ಸು ಮತ್ತು ಆತ್ಮವನ್ನು ಸಮೃದ್ಧಗೊಳಿಸುತ್ತದೆ. ಅಂತಾರಾಷ್ಟ್ರೀಯ ಯೋಗದಿನ ಶುಭಾಶಯಗಳು" ಎಂದು ಗೌತಮ್ ಗಂಭೀರ್ ಪ್ರಾಣಾಯಾಮ ಮಾಡುತ್ತಿರುವ ತಮ್ಮ ಫೋಟೋ ಪೋಸ್ಟ್ ಮಾಡಿದ್ದಾರೆ.