ಆಂಟಿಗುವಾ:ಚಾಂಪಿಯನ್ ಭಾರತ ತಂಡದ ನಾಯಕ ಯಶ್ ಧುಲ್ ಅವರು ಐಸಿಸಿ ಅಂಡರ್ 19 ವಿಶ್ವಕಪ್ನ 'ಅತ್ಯಂತ ಮೌಲ್ಯಯುತ ತಂಡ'ಕ್ಕೆ(Most Valuable Team) ನಾಯಕನಾಗಿ ನೇಮಕವಾಗಿದ್ದಾರೆ.
ನೂತನ ಚಾಂಪಿಯನ್ ಭಾರತ ತಂಡ ಸೇರಿದಂತೆ ಒಟ್ಟು 8 ರಾಷ್ಟ್ರಗಳ 12 ಆಟಗಾರರನ್ನು ಹೊಂದಿರುವ ಈ ವಿಶ್ವಕಪ್ ಕಿರಿಯರ ಇಲೆವೆನ್ನಲ್ಲಿ ಯಶ್ ಧುಲ್ ಅಲ್ಲದೆ ಭಾರತದ ಆಲ್ರೌಂಡರ್ ರಾಜ್ ಬಾವಾ ಮತ್ತು ವಿಕ್ಕಿ ಓಸ್ತ್ವಾಲ್ಅವಕಾಶ ಪಡೆದುಕೊಂಡಿದ್ದಾರೆ.
ಕಮೆಂಟೇಟೆರ್ಗಳಾದ ಸ್ಯಾಮ್ಯುಯೆಲ್ ಬದ್ರಿ, ನ್ಯಾಟ್ ಜರ್ಮನೊಸ್, ಐಸಿಸಿ ಮ್ಯಾಚ್ ರೆಫ್ರಿ ಗ್ರೇಮ್ ಲ್ಯಾಬ್ರೂಯ್ ಮತ್ತು ಪತ್ರಕರ್ತ ಸಂದೀಪನ್ ಬ್ಯಾನರ್ಜಿ ಅವರನ್ನೊಳಗೊಂಡ ಆಯ್ಕೆ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದ್ದಾರೆ.
ಧುಲ್ ಬ್ಯಾಟಿಂಗ್ನಲ್ಲಿ 229 ರನ್ಗಳಿಸಿದರೆ ಮತ್ತು ಸಂದರ್ಭಕ್ಕೆ ತಕ್ಕ ಬೌಲಿಂಗ್ ಬದಲಾವಣೆ ಮಾಡುವ ಮೂಲಕ ಟೂರ್ನಿಯುದ್ದಕ್ಕೂ ಅದ್ಭುತ ನಾಯಕತ್ವ ನಿರ್ವಹಣೆ ಮಾಡಿದ್ದಕ್ಕಾಗಿ ಈ ವಿಶ್ವಕಪ್ ತಂಡಕ್ಕೆ ನಾಯಕನಾಗಿ ನೇಮಕವಾಗಿದ್ದಾರೆ.
ಇನ್ನು ಟೂರ್ನಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮಿನಿ ಎಬಿಡಿ ಎಂದೇ ಖ್ಯಾತರಾಗಿರುವ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್ ಹಾಗೂ ಇಂಗ್ಲೆಂಡ್ ನಾಯಕ ಟಾಮ್ ಪ್ರಿಸ್ಟ್ ಇದ್ದಾರೆ. ಇವಿರಬ್ಬರು ಕ್ರಮವಾಗಿ 506 ಮತ್ತು 292 ರನ್ಗಳಿಸಿದ್ದರು. ಬ್ರೇವಿಸ್ ಬೌಲಿಂಗ್ನಲ್ಲೂ 7 ವಿಕೆಟ್ ಪಡೆದಿದ್ದರು. ಅಲ್ಲದೆ 2004ರಲ್ಲಿ ಭಾರತದ ಆರಂಭಿಕ ಬ್ಯಾಟರ್ ಸಿಡಿಸಿದ್ದ 505 ರನ್ಗಳ ವಿಶ್ವದಾಖಲೆಯನ್ನು ಬ್ರೇಕ್ ಮಾಡಿದರು.
ನಂತರ ಭಾರತದ ಆಲ್ರೌಂಡರ್ ರಾಜ್ ಬಾವಾ ಆಲ್ರೌಂಡರ್ ಸ್ಥಾನದಲ್ಲಿದ್ದಾರೆ. ಅವರು ಟೂರ್ನಿಯಲ್ಲಿ ಉಗಾಂಡ ವಿರುದ್ಧ 162 ರನ್ ಸೇರಿದಂತೆ ಒಟ್ಟು 252 ರನ್ ಮತ್ತು 9 ವಿಕೆಟ್ ಪಡೆದಿದ್ದಾರೆ. ಅವರು ಫೈನಲ್ ಪಂದ್ಯದಲ್ಲಿ 31 ರನ್ ನೀಡಿ 5 ವಿಕೆಟ್ ಪಡೆದಿದ್ದರಲ್ಲದೆ, ನಿರ್ಣಾಯಕ 35 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇವರ ಜೊತೆಗೆ 12 ವಿಕೆಟ್ ಪಡೆದಿದ್ದ ಮತ್ತೊಬ್ಬ ಭಾರತೀಯ ವಿಕ್ಕಿ ಓಸ್ತ್ವಾಲ್, 3.21ರ ಎಕಾನಮಿಯಲ್ಲಿ 15 ವಿಕೆಟ್ ಪಡೆದಿರುವ ರನ್ನರ್ ಅಪ್ ಇಂಗ್ಲೆಂಡ್ ತಂಡದ ಜೋಶ್ ಬೋಡೆನ್ ಕೂಡ ಅವಕಾಶ ಪಡೆದುಕೊಂಡಿದ್ದಾರೆ.
2022ರ ಐಸಿಸಿ ಅಂಡರ್ 19 ವಿಶ್ವಕಪ್ ತಂಡ: ಹಸೀಬುಲ್ಲಾ ಖಾನ್(ವಿಕೀ, ಪಾಕಿಸ್ತಾನ), ಟೀಗ್ ವೈಲಿ(ಆಸ್ಟ್ರೇಲಿಯಾ),ಡೆವಾಲ್ಡ್ ಬ್ರೇವಿಸ್(ದ.ಆಫ್ರಿಕಾ), ಯಶ್ ಧುಲ್(ನಾಯಕ, ಭಾರತ), ಟಾಮ್ ಪ್ರಿಸ್ಟ್(ಇಂಗ್ಲೆಂಡ್) ದುನಿತ್ ವೆಲ್ಲಲಗೆ(ಶ್ರೀಲಂಕಾ), ರಾಜ್ ಬಾವಾ(ಭಾರತ), ವಿಕಿ ಓಸ್ತ್ವಾಲ್(ಭಾರತ),ರಿಪನ್ ಮಂಡಲ್(ಬಾಂಗ್ಲಾದೇಶ), ಅವೈಸ್ ಅಲಿ(ಪಾಕಿಸ್ತಾನ), ಜೋಶ್ ಬೋಡೆನ್(ಇಂಗ್ಲೆಂಡ್), ನೂರ್ ಅಹ್ಮದ್(ಅಫ್ಘಾನಿಸ್ತಾನ)
ಇದನ್ನೂ ಓದಿ:U-19 ವಿಶ್ವಕಪ್ ಗೆದ್ದ ಭಾರತ: ಆಟಗಾರರಿಗೆ 40 ಲಕ್ಷ ರೂ. ಬಹುಮಾನ ಘೋಷಿಸಿದ ಬಿಸಿಸಿಐ