ನವದೆಹಲಿ :ವೆಸ್ಟ್ ಇಂಡೀಸ್ನಲ್ಲಿ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಭಾರತಕ್ಕೆ 5ನೇ ಟ್ರೋಫಿ ತಂದು ಕೊಟ್ಟಿರುವ ಯುವ ನಾಯಕ ಯಶ್ ಧುಲ್, ತಾವು ವಿರಾಟ್ ಕೊಹ್ಲಿಯಂತೆ ಬ್ಯಾಟರ್ ಆಗುವುದಾಗಿ ಶಾಲಾ ದಿನಗಳಿಂದಲೂ ಹೇಳುತ್ತಿದ್ದರು ಎಂದು ಅವರ ಕೋಚ್ ರಾಜೇಶ್ ನಗರ್ ಹೇಳಿದ್ದಾರೆ.
2022ರ U19 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ತಮಗೆ ಸ್ಫೂರ್ತಿಯಾಗಿರುವ ಕೊಹ್ಲಿ ಹೆಸರಿರುವ ಪಟ್ಟಿಯಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಭಾರತ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ 5ನೇ ಬಾರಿ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿತ್ತು.
ವಿಶ್ವಕಪ್ನಲ್ಲಿ ನಾಯಕತ್ವವಹಿಸಿ ದೇಶಕ್ಕೆ ಟ್ರೋಫಿ ಗೆದ್ದುಕೊಟ್ಟಿರುವ ತಮ್ಮ ಶಿಷ್ಯನನ್ನು ನೋಡುವುದಕ್ಕೆ ಎದುರು ನೋಡುತ್ತಿರುವುದಾಗಿ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಗರ್ ತಿಳಿಸಿದ್ದಾರೆ.
"ನನಗೆ ಯಶ್ ಭಾರತಕ್ಕಾಗಿ ವಿಶ್ವಕಪ್ ತಂದುಕೊಡಲಿದ್ದಾರೆ ಎನ್ನುವ ವಿಶ್ವಾಸವಿತ್ತು. ಆತ ಗೆಲುವಿಗಾಗಿ ಸದಾ ಹಸಿವಿನಿಂದ ಇರುತ್ತಾನೆ. ಅವನ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಹೆಮ್ಮೆಯ ಕೋಚ್. ಆತ ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾನೆ ಮತ್ತು ಇಡೀ ತಂಡ ಕೂಡ ಅದ್ಭುತ ಪ್ರದರ್ಶನ ತೋರಿದೆ. ಇದೊಂದು ಉತ್ತಮ ತಂಡ. ಅಂಡರ್ 19 ವಿಶ್ವಕಪ್ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ" ಎಂದು ನಗರ್ ತಿಳಿಸಿದ್ದಾರೆ.