ಸೌತಾಂಪ್ಟನ್:ಇಂದಿನಿಂದ ಆರಂಭಗೊಳ್ಳಬೇಕಾಗಿರುವ ಭಾರತ-ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಮಳೆರಾಯನ ಕಾಟ ಶುರುವಾಗಿದೆ. ಇಂದು ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಟೆಸ್ಟ್ನ ಮೊದಲ ಸೆಷನ್ ರದ್ಧುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ಮೊದಲ ದಿನವೇ ನಿರಾಸೆ ಮೂಡಿದೆ.
ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ 3:30ಕ್ಕೆ ಟಾಸ್ ಮಾಡಬೇಕಾಗಿತ್ತು. ಆದರೆ ಮಳೆ ಶುರುವಾಗಿರುವ ಕಾರಣ ಇದರಲ್ಲಿ ವಿಳಂಬವಾಗಲಿದೆ. ಫೈನಲ್ನಲ್ಲಿ ಗೆಲುವು ಸಾಧಿಸುವ ಉದ್ದೇಶದೊಂದಿಗೆ ಉಭಯ ತಂಡಗಳು ಮೈದಾನಕ್ಕಿಳಿಯಲು ಸಜ್ಜುಗೊಂಡಿವೆ. ಆದರೆ ಇದರ ಮಧ್ಯೆ ಮಳೆಯಾಟ ಶುರುವಾಗಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡ ಇಲ್ಲಿಯವರೆಗೆ 59 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 21 ಹಾಗೂ ನ್ಯೂಜಿಲ್ಯಾಂಡ್ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ 26 ಪಂದ್ಯಗಳು ಡ್ರಾನಲ್ಲಿ ಮುಕ್ತಾಯಗೊಂಡಿವೆ. ಪ್ರಮುಖವಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ 17 ಪಂದ್ಯಗಳನ್ನಾಡಿದ್ದು, 12ರಲ್ಲಿ ಗೆಲುವು ಹಾಗೂ 4 ರಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.