ಒವೆಲ್ (ಲಂಡನ್): ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪ್ಯಾಟ್ ಕಮಿನ್ಸ್ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಭಾರತದ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟದ ನೆರವಿನಿಂದ ಭಾರತ ಮೂರನೇ ದಿನ ಸ್ವಲ್ಪ ಚೇತರಿಕೆ ಕಂಡುಕೊಂಡಿದ್ದು ಫಾಲೋ ಆನ್ ಭೀತಿಯಿಂದ ತಪ್ಪಿಸಿಕೊಂಡಿತು.
ಆದರೆ ಈ ನಡುವೆ, ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ನೋಬಾಲ್ಗಾಗಿ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಆಸ್ಟ್ರೇಲಿಯಾ ತಂಡ ಇದುವರೆಗೆ 8 ನೋಬಾಲ್ಗಳನ್ನು ಹಾಕಿದರೆ ಅದರಲ್ಲಿ 6 ಕಮಿನ್ಸ್ ಅವರದ್ದೇ ಇದೆ. ಪ್ಯಾಟ್ ಅವರ ನೋಬಾಲ್ ಭಾರತಕ್ಕೆ ಎರಡು ಜೀವದಾನ ನೀಡಿದೆ. ನಿನ್ನೆ ಅಜಿಂಕ್ಯ ರಹಾನೆ ವಿಕೆಟ್ ತಪ್ಪಿದರೆ, ಇಂದು ಶಾರ್ದೂಲ್ ಠಾಕೂರ್ ಅವರ ವಿಕೆಟ್ ಉಳಿದಿದೆ.
ಟ್ರೋಲ್ ಏಕೆ?: ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮುಗಿದ ನಾಲ್ಕು ದಿನದಲ್ಲಿ ಆ್ಯಶಸ್ ಸರಣಿಗೆ ಆಡಲಿದೆ. ಇದಕ್ಕಾಗಿ ಕಾಂಗರೂ ಪಡೆ ಇನ್ನು ಕೆಲವು ತಿಂಗಳು ಇಂಗ್ಲೆಂಡ್ನಲ್ಲೇ ಇರಲಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಆ್ಯಶಸ್ ಸರಣಿಗಾಗಿ ಆಸಿಸ್ ಆಟಗಾರರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ಗೆ ದೊಡ್ಡ ಪ್ರವಾಸವನ್ನೇ ಕೈಗೊಂಡಿದೆ. ಈ ಪ್ರವಾಸಕ್ಕೂ ಮೊದಲು ಪ್ಯಾಟ್ ಕಮಿನ್ಸ್ ತಮ್ಮ ಟ್ವಿಟರ್ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ "ಒಂದೆರಡು ದಿನಗಳಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವ ಮೊದಲು ಸಿಡ್ನಿಯಲ್ಲಿ ಅಂತಿಮ ತಯಾರಿ. ಎಲ್ಲ ಹುಡುಗರು ಯುಕೆ ಪ್ರವಾಸಕ್ಕಾಗಿ ತಯಾರಾಗುತ್ತಿದ್ದಾರೆ" ಎಂದು ಬರೆದುಕೊಂಡಿದ್ದರು. ಅದರಲ್ಲಿ ಅವರು ಸಿಡ್ನಿ ಪಿಚ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಈ ವೇಳೆ ಶೂ ಒಂದರ ಜಾಹೀರಾತು ಮಾಡಿದ್ದಾರೆ. ಆದರೆ ಅವರು ಮಾಡಿದ್ದು ನೋಬಾಲ್ ಆಗಿತ್ತು. ಅವರು ವಿಡಿಯೋ ಕ್ಯಾಪ್ಶನ್ನಲ್ಲಿ "ಇದು ನೋಬಾಲ್ ಎಂದು ತಿಳಿದಿದೆ" ಎಂದೂ ಬರೆದುಕೊಂಡಿದ್ದರು.