ಸೌಥಾಂಪ್ಟನ್ (ಇಂಗ್ಲೆಂಡ್):ಸೌಥಾಂಪ್ಟನ್‌ನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಎರಡನೇ ದಿನವಾದ ಇಂದು ಕೂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಮಳೆಯಿಂದಾಗಿ 5 ದಿನಗಳ ಪಂದ್ಯಕ್ಕೆ ಹೆಚ್ಚುವರಿಯಾಗಿ ಒಂದು ದಿನವನ್ನು ಕಾಯ್ದಿರಿಸಲಾಗಿತ್ತು. ಇದೀಗ ಆ ದಿನವೂ ಮಳೆಗೆ ಬಲಿಯಾಗುವ ಅನುಮಾನ ಮೂಡಿದೆ.
ಸೌಥಾಂಪ್ಟನ್‌ನ ಹವಾಮಾನ ವೆಬ್‌ಸೈಟ್ ಪ್ರಕಾರ, ಸ್ಥಳೀಯ ಕಾಲಮಾನದಂತೆ ಮಧ್ಯಾಹ್ನ 2 ಗಂಟೆ ಬಳಿಕ ಭಾಗಶಃ ಬಿಸಿಲಿನ ವಾತಾವರಣ ಕಂಡು ಬರಲಿದೆ. ಆದರೆ ಮುಂದಿನ 3 ದಿನಗಳ ರಾತ್ರಿ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ವೆಬ್‌ಸೈಟ್ ಹೇಳಿದೆ. ಒಂದು ವೇಳೆ ಇಂದು ಬಿಸಿಲಿನ ವಾತಾವರಣ ಕಂಡು ಬಂದರೆ ಬೆಳಗ್ಗೆ 10 ಗಂಟೆಗೆ (2.30pm ಐಎಸ್‌ಟಿ) ಟಾಸ್ ಹಾಕಲಾಗುತ್ತದೆ. ಆದರೆ ಮಳೆ ಹೀಗೆಯೇ ಮುಂದುವರಿದರೆ ಅಂಪೈರ್‌ಗಳು 2ನೇ ದಿನದ ಆಟವನ್ನೂ ನಿಲ್ಲಿಸುವುದರಲ್ಲಿ ಅಶ್ಚರ್ಯವಿಲ್ಲ.