ಭಾರತ ತಂಡದ ಅನುಭವಿ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಜಡೇಜಾ ಮೇಲೆ ಆಸ್ಟ್ರೇಲಿಯನ್ ಆಟಗಾರರಿಗೆ ಭಯವಿದೆ. ಇಂಗ್ಲೆಂಡ್ನ ವೇಗದ ಪಿಚ್ನಲ್ಲೂ ಅವಳಿ ಸ್ಪಿನ್ನರ್ಗಳು ಕಮಾಲ್ ಮಾಡುತ್ತಾರೆ ಎಂದು ಆಸ್ಟ್ರೇಲಿಯಾ ತಂಡದ ಉಪನಾಯಕ ಈ ಹಿಂದೆಯೇ ಹೇಳಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾರತದ ಆಡುವ ಬಳಗದಲ್ಲಿ ಇಬ್ಬರೂ ಸ್ಪಿನ್ನರ್ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರವೀಂದ್ರ ಜಡೇಜಾ ಬೌಲಿಂಗ್ ಜೊತೆಗೆ ಈಗ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಬ್ಯಾಟಿಂಗ್ನಿಂದ ಹೆಚ್ಚು ಸದ್ದು ಮಾಡಿದ್ದರು. ಹೀಗಾಗಿ ರಿಕ್ಕಿ ಪಾಂಟಿಂಗ್ ಅವರು ಜಡೇಜಾ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡಿತ್ತು. ಈ ಪಂದ್ಯದ ಫಲಿತಾಂಶದ ಆಧಾರದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ತಂಡಗಳು ಯಾವುದು ಎಂದು ನಿರ್ಧಾರ ಆಗುವುದಿತ್ತು. ಭಾರತ ಈ ಸರಣಿಯಲ್ಲಿ 2-1 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಇದರಲ್ಲಿ ಅವಳಿ ಸ್ಪಿನ್ನರ್ಗಳು ಭರ್ಜರಿ ಬೌಲಿಂಗ್ ಮಾಡಿದ್ದರು. ಜಡೇಜಾ ಎರಡು ಬಾರಿ ಸರಣಿಯಲ್ಲಿ 5 ವಿಕೆಟ್ ಗೊಂಚಲು ಪಡೆದರೆ, ಅಶ್ವಿನ್ ಒಂದು ಬಾರಿ ಪಂಚ್ ಕಜ್ಜಾಯ ಸವಿದಿದ್ದರು. ಇದು ಭಾರತದ ಗೆಲುವಿಗೆ ಮತ್ತೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಕ್ಕೆ ಸಹಕಾರಿಯಾಗಿತ್ತು.
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಪಾಂಟಿಂಗ್ ಅವರು ಜಡೇಜಾ ಅವರನ್ನು ಬೌಲರ್‌ಗಿಂತ ಬ್ಯಾಟರ್ ಆಗಿ ನೋಡಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ರಿಕ್ಕಿ, ಅಶ್ವಿನ್ ಅವರನ್ನು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸ್ಪಿನ್ ಬೌಲರ್ ಆಗಿ ಸೇರಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ. ಭಾರತ ಆಡುವ 11ರ ಬಳಗದ ಬಗ್ಗೆ ಕೇಳಲಾದ ಪ್ರಶ್ನೆಗೆ ಪಾಂಟಿಂಗ್, ಅಶ್ವಿನ್ ಮತ್ತು ಜಡೇಜಾ ಜೋಡಿಯ ಬಗ್ಗೆ ಒತ್ತಿ ಹೇಳಿದ್ದಾರೆ. ಜಡೇಜಾ ಬ್ಯಾಟಿಂಗ್‌ನಲ್ಲಿ 6ನೇ ಸ್ಥಾನದಲ್ಲಿ ಬರಬೇಕು ಎಂದು ಕಿವಿಮಾತು ನುಡಿದಿದ್ದಾರೆ. "ಜಡೇಜಾರ ಬ್ಯಾಟಿಂಗ್ ಎಷ್ಟು ಸುಧಾರಿಸಿದೆ ಎಂದರೆ ಅವರನ್ನು ಬೌಲರ್ ಎಂದಲ್ಲ ಬ್ಯಾಟರ್ ಎಂದು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು" ಎಂದು ಅಭಿಪ್ರಾಯಿಸಿದ್ದಾರೆ.