ದುಬೈ: 2021-23ನೇ ಸಾಲಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ಆವೃತ್ತಿಯಲ್ಲೂ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಮುಖಾಮುಖಿಯಾಗುತ್ತಿಲ್ಲ. ಉಳಿದಂತೆ ಮೂರು ಸರಣಿ ಭಾರತದಲ್ಲಿ ಹಾಗೂ ಮೂರು ವಿದೇಶದಲ್ಲಿ ಆಡಲಿದೆ.
ಐಸಿಸಿ ರಿಲೀಸ್ ಮಾಡಿರುವ ವೇಳಾಪಟ್ಟಿ ಪ್ರಕಾರ ಟೀಂ ಇಂಡಿಯಾ ಮೂರು ಟೆಸ್ಟ್ ಸರಣಿ ಭಾರತದಲ್ಲಿ ಹಾಗೂ ಮೂರು ಟೆಸ್ಟ್ ಸರಣಿ ವಿದೇಶದಲ್ಲಿ ಆಡಲಿದೆ. ಹೋಮ್ಗ್ರೌಂಡ್ನಲ್ಲಿ ಶ್ರೀಲಂಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದ್ದು, ವಿದೇಶದಲ್ಲಿ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಎಲ್ಲ ತಂಡಗಳು ಒಟ್ಟು ಆರು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಆರು ಹೋಮ್ಗ್ರೌಂಡ್ ಹಾಗೂ ಮೂರು ವಿದೇಶದಲ್ಲಿ ನಡೆಯಲಿವೆ. ಇಂಗ್ಲೆಂಡ್ ವಿರುದ್ಧದ ಸರಣಿ ಆಡಲು ಭಾರತ ಈಗಾಗಲೇ ಆಂಗ್ಲರ ನಾಡಿನಲ್ಲಿದ್ದು, ಮುಂದಿನ ತಿಂಗಳು ಆಗಸ್ಟ್ 4ರಿಂದ ಈ ಟೂರ್ನಿ ಆರಂಭಗೊಳ್ಳಲಿದೆ.
ಇದನ್ನೂ ಓದಿರಿ: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸೋತ ಭಾರತ... T20 ಸರಣಿ ಗೆದ್ದ ಇಂಗ್ಲೆಂಡ್ ಮಹಿಳಾ ಪಡೆ
2021ರ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ, 2022ರ ನವೆಂಬರ್ನಲ್ಲಿ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದೆ. ಮುಂದಿನ ವರ್ಷ ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ಟೆಸ್ಟ್ ಪಂದ್ಯಗಳ ಸರಣಿ ಆಯೋಜನೆಗೊಂಡಿದೆ. ನ್ಯೂಜಿಲ್ಯಾಂಡ್ ವಿರುದ್ಧ ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಭಾರತ ಹೋಮ್ ಗ್ರೌಂಡ್ನಲ್ಲಿ ಹಾಗೂ ಶ್ರೀಲಂಕಾ ವಿರುದ್ಧ 2022ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಸರಣಿ ಆಡಲಿದೆ.
ವಿಶೇಷವೆಂದರೆ 2021-2023ರ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಭಾರತ-ಪಾಕ್ ಮುಖಾಮುಖಿಯಾಗುತ್ತಿಲ್ಲ. ಆದರೆ ಪಾಕ್ ತಂಡ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮುಖಾಮುಖಿಯಾಗುತ್ತಿದೆ.