ಕರ್ನಾಟಕ

karnataka

ETV Bharat / sports

36 ಎಸೆತ 99 ರನ್! ಸೋಫಿ ಡಿವೈನ್ RCBಯ ಕ್ರಿಸ್‌ ಗೇಲ್ ಎಂದ ನೆಟ್ಟಿಗರು! ಪ್ಲೇ ಆಫ್‌ಗೇರುತ್ತಾ ಮಂಧಾನ ಟೀಂ? - ಆರ್​ಸಿಬಿ ಗುಜರಾತ್​ ಜೈಂಟ್ಸ್​ ಪಂದ್ಯ

ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಟಿ20 ಪಂದ್ಯಗಳು ಕಳೆಗಟ್ಟಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಗುಜರಾತ್​ ಜೈಂಟ್ಸ್ ಮಧ್ಯೆ ನಿನ್ನೆ ನಡೆದ ಪಂದ್ಯ ಕ್ರಿಕೆಟ್​ ಖುಷಿ ಹೆಚ್ಚಿಸಿತು.

ಆರ್​ಸಿಬಿ ಸತತ 2ನೇ ಗೆಲುವು
ಆರ್​ಸಿಬಿ ಸತತ 2ನೇ ಗೆಲುವು

By

Published : Mar 19, 2023, 7:07 AM IST

ಮುಂಬೈ:ನ್ಯೂಜಿಲ್ಯಾಂಡ್​ ಆಟಗಾರ್ತಿ ಸೋಫಿ ಡಿವೈನ್​ರ ಬಿರುಗಾಳಿಯ ಬ್ಯಾಟಿಂಗ್​ನಿಂದಾಗಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 2 ನೇ ಗೆಲುವು ದಾಖಲಿಸಿದೆ. ಇಲ್ಲಿನ ಬ್ರಬೌರ್ನ್​ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ತಂಡವನ್ನು 8 ವಿಕೆಟ್​ಗಳ ಸೋಲಿಸಿತು. ಗೆಲುವಿನ ರೂವಾರಿಯಾದ ಸೋಫಿ ಡಿವೈನ್​ ಶತಕದಿಂದ ತಪ್ಪಿಸಿಕೊಂಡರು.

ಆರ್‌ಸಿಬಿ 'ಡಿವೈನ್' ಕಳೆ: ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಚುಟುಕು ಪಂದ್ಯಗಳು ಕುತೂಹಲ ಕೆರಳಿಸುತ್ತಿವೆ. ಪುರುಷರ ಟೂರ್ನಿಗೆ ಸಮನಾಗಿ ಮಹಿಳಾ ಮಣಿಗಳು ತಮ್ಮ ಭುಜಬಲ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಸೋಫಿ ಡಿವೈನ್​ರ ನಿನ್ನೆಯ ಆಟ. ಚೆಂಡನ್ನು ಮನಬಂದಂತೆ ದಂಡಿಸಿದ ಡಿವೈನ್​ ಅಕ್ಷರಶಃ ಕ್ರೀಡಾಂಗಣದಲ್ಲಿ ಅಲೆ ಎಬ್ಬಿಸಿದರು. ಟಿ20 ಕ್ರಿಕೆಟ್​ನ ರಸದೌತಣ ನೀಡಿದರು. ಅದರ ಪ್ರತಿಫಲ ಆರ್​ಸಿಬಿಗೆ ಗೆಲುವಿನ ಸಿಂಚನ.

ಗುಜರಾತ್​ ಜೈಂಟ್ಸ್​ ನೀಡಿದ್ದ 184 ರನ್​ಗಳ ಬೃಹತ್​ ಮೊತ್ತವನ್ನು ಆರ್​ಸಿಬಿ ಈಗಿನ ಪರಿಸ್ಥಿತಿಗೆ ದಾಟಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಅಚ್ಚರಿ ಎಂಬಂತೆ ಬ್ಯಾಟ್​ ಮಾಡಿ ಆರ್​ಸಿಬಿ ತಾನು ಇನ್ನೂ ಟೂರ್ನಿಯಿಂದ ಹೊರಬಿದ್ದಿಲ್ಲ ಎಂಬುದನ್ನು ಸಾಬೀತು ಮಾಡಿತು. ಇದಕ್ಕೆ ಪ್ರಮುಖ ಕಾರಣ ಸೋಫಿ ಡಿವೈನ್​ ಮತ್ತು ನಾಯಕಿ ಸ್ಮೃತಿ ಮಂಧಾನ.

ಕ್ರಿಸ್‌ಗೇಲ್‌ಗೆ ಹೋಲಿಕೆ!​:ಬೃಹತ್​ ಮೊತ್ತ ಮುಂದಿದ್ದರೂ ಅದನ್ನು ಪರಿಗಣಿಸದೇ ಬ್ಯಾಟಿಂಗ್​ ಮಾಡಿದ ಸೋಫಿ ಡಿವೈನ್​, ಕೇವಲ 36 ಎಸೆತಗಳಲ್ಲಿ 99 ರನ್​ ಗಳಿಸಿ ಶತಕದ ಅಂಚಿನಲ್ಲಿ ಔಟಾದರು. 9 ಬೌಂಡರಿ, 8 ಭರ್ಜರಿ ಸಿಕ್ಸರ್​ ಸಿಡಿಸಿದ ಡಿವೈನ್​ ಅಭಿಮಾನಿಗಳ ಕಿಕ್ಕೇರಿಸಿದರು. ನ್ಯೂಜಿಲ್ಯಾಂಡ್​ ತಂಡದಲ್ಲಿ ಬೌಲರ್​ ಆಗಿ ವೃತ್ತಿಜೀವನ ಆರಂಭಿಸಿದ್ದ ಸೋಫಿ, ಬಳಿಕ ಆಲ್​ರೌಂಡರ್ ಆಗಿ ಗುರುತಿಸಿಕೊಂಡರು. ಟಿ20 ಪಂದ್ಯದಲ್ಲಿ ಇದು ಅವರ ಅತ್ಯದ್ಭುತ ಪ್ರದರ್ಶನವಾಗಿದೆ. ಈ ಆಟ ನೋಡಿ ಪುಳಕಗೊಂಡ ಅಭಿಮಾನಿಗಳು ಡಿವೈನ್‌ ಆರ್‌ಸಿಬಿಯ ಕ್ರಿಸ್‌ ಗೇಲ್‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಜರಾತ್​ ಜೈಂಟ್ಸ್​ನ ಬೌಲರ್​ಗಳನ್ನು ದಂಡಿಸಿದ ಸೋಫಿ, ಕ್ರೀಡಾಂಗಣದಲ್ಲಿ ಮೆರೆದಾಡಿದರು. ಇವರಿಗೆ ಉತ್ತಮ ಸಾಥ್​ ನೀಡಿದ ನಾಯಕಿ ಸ್ಮೃತಿ ಮಂಧಾನ 37 ರನ್​ ಮಾಡಿದರು. ಮೊದಲ ವಿಕೆಟ್​ಗೆ ಇಬ್ಬರೂ ಸೇರಿ 125 ರನ್​ಗಳ ಜೊತೆಯಾಟ ನೀಡಿದರು. ಎಲ್ಲಿಸ್​ ಪೆರ್ರಿ 19, ಹೀಥರ್​ ನೈಟ್​ 22 ರನ್​ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು. ಈ ಮೂಲಕ ತಂಡ 27 ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ದಾಟಿ ಎರಡನೇ ಸತತ ಗೆಲುವಿನೊಂದಿಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಗುಜರಾತ್​ ಭರ್ಜರಿ ಬ್ಯಾಟಿಂಗ್​:ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಜೈಂಟ್ಸ್​ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿತು. ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಲಾರಾ ವೊಲ್ವಾರ್ಡ್​ರ ಅರ್ಧಶತಕ, ಗಾರ್ಡ್ನರ್​ರ ಹೋರಾಟದ ಬಲದಿಂದ ಜೈಂಟ್ಸ್ 4 ವಿಕೆಟ್‌ಗೆ 188 ರನ್ ಬೃಹತ್​ ಮೊತ್ತ ಪೇರಿಸಿತು. ವೊಲ್ವಾರ್ಡ್​ರ 42 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್​ ಸಮೇತ 68 ರನ್​ ಮಾಡಿದರೆ, ಸೋಫಿಯಾ ಡಂಕ್ಲಿ 16, ಸಬ್ಬಿನೇನಿ ಮೇಘನಾ 31, ಗಾರ್ಡ್ನರ್​ 41, ಡೈಲಾನಾ ಹೇಮಲತಾ ಔಟಾಗದೇ 16, ಹರ್ಲೀನ್ ಡಿಯೋಲ್ ಔಟಾಗದೆ 12 ರನ್​ ಗಳಿಸಿದರು.

ಇದನ್ನೂ ಓದಿ:ಕ್ರಿಕೆಟ್​ ಇಂಟ್ರೆಸ್ಟಿಂಗ್​ ಆಗಿಸಲು ಏನು ಮಾಡಬೇಕು?: ಸಚಿನ್​ ತೆಂಡೂಲ್ಕರ್​

ABOUT THE AUTHOR

...view details