ಮುಂಬೈ: ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಕೃತಿ ಸನೋನ್, ಕಿಯಾರಾ ಅಡ್ವಾಣಿ ಮತ್ತು ಸ್ಟಾರ್ ಸಿಂಗರ್ ಎ.ಪಿ.ಧಿಲ್ಲೋನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಹಿಳಾ ಆಟಗಾರರ ಜೊತೆ ಕ್ರಿಕೆಟ್ ವೀಕ್ಷಿಸಲು ಆಗಮಿಸಿದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿದರು.
ತಮ್ಮ ಸಿನಿಮಾಗಳ ಹಿಟ್ ಹಾಡುಗಳೊಂದಿಗೆ ಕಿಯಾರಾ ಕಾರ್ಯಕ್ರಮ ಪ್ರಾರಂಭಿಸಿದರು. ಬಳಿಕ ಕೃತಿ 'ಚಕ್ ದೇ ಇಂಡಿಯಾ'ದ ಹಾಡಿಗೆ ಹೃದಯಸ್ಪರ್ಶಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದರು. ಇಬ್ಬರೂ ನಟಿಯರು ಪ್ರಮುಖ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಇನ್ನು ಎ.ಪಿ.ಧಿಲ್ಲೋನ್ ಈಗಾಗಲೇ ಕ್ರಿಕೆಟ್ ಆಟಗಾರ್ತಿಯರಾದ ಹರ್ಲೀನ್ ಡಿಯೋಲ್ ಮತ್ತು ಜೆಮಿಮಾ ರೋಡ್ರಿಗಸ್ ಅವರೊಂದಿಗೆ ಸಂವಾದ ನಡೆಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹವಾ ಸೃಷ್ಟಿಸಿದ್ದಾರೆ. ಅವರೂ ಸಹ ನಿನ್ನೆ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರಿಗೆ ಸಖತ್ ಎಂಟರ್ಟೈನ್ಮೆಂಟ್ ಕೊಟ್ಟರು.
ಇಷ್ಟು ದಿನಗಳ ಕಾಲ ವನಿತೆಯರ ಕ್ರಿಕೆಟ್ ಲೀಗ್ ಅಂದ್ರೆ ಕೇವಲ ಆಸ್ಟ್ರೇಲಿಯದ ಬಿಗ್ ಬಾಶ್ ಲೀಗ್ ಮಾತ್ರ ನೆನಪಾಗುತ್ತಿತ್ತು. ಆದ್ರೆ, ಇದೀಗ ಭಾರತದಲ್ಲಿ ಕೆಲವು ಅತ್ಯುತ್ತಮ ಆಟಗಾರರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗುವ ಮೂಲಕ ಹೊಸ ಶಖೆ ಶುರುವಾಗಿದೆ. ಮೊದಲ ಅವೃತ್ತಿಯ ಪ್ರಾರಂಭಿಕ ಆಟದಲ್ಲಿ ನಿನ್ನೆ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಕಾದಾಟ ನಡೆಯಿತು. ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 143 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.