ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಚೊಚ್ಚಲ ಆವೃತ್ತಿಗೆ ನಿನ್ನೆ ಸಂಜೆ ಭರ್ಜರಿ ಚಾಲನೆ ಸಿಕ್ಕಿದೆ. ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 143 ರನ್‌ಗಳ ಅಂತರದ ಅಮೋಘ ಜಯ ಸಾಧಿಸಿತು.
ಮುಂಬೈ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು 30 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 65 ರನ್ ಸಿಡಿಸಿದರು. ತಂಡವು 5 ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದಾದ ನಂತರ ಸೈಕಾ ಇಶಾಕ್ (4/11) ನೇತೃತ್ವದ ಮುಂಬೈ ಬೌಲರ್‌ಗಳು ಗುಜರಾತ್ ಜೈಂಟ್ಸ್ ತಂಡವನ್ನು 15.1 ಓವರ್‌ಗಳಲ್ಲಿ ಕೇವಲ 64 ರನ್‌ಗಳಿಗೆ ಕಟ್ಟಿ ಹಾಕಿದರು. ಈ ಮೂಲಕ ಮುಂಬೈ ಸ್ಮರಣೀಯ ವಿಜಯ ದಾಖಲಿಸಿತು.
ಗುಜರಾತ್ ನಾಯಕಿ ಬೆತ್ ಮೂನಿ ಮೊದಲ ಓವರ್‌ನಲ್ಲಿಯೇ ಗಾಯಗೊಂಡು, ನಂತರ ಬ್ಯಾಟಿಂಗ್‌ಗೆ ಮರಳಲು ಸಾಧ್ಯವಾಗಲಿಲ್ಲ. ಮುಂಬೈ ಆರಂಭದಿಂದಲೂ ಗುಜರಾತ್ ಮೇಲೆ ಪ್ರಾಬಲ್ಯ ಸಾಧಿಸಿತು. ಮಾತ್ರವಲ್ಲದೇ, ಮೊದಲ ಪಂದ್ಯದಲ್ಲಿಯೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಆಕ್ರಮಣಕಾರಿ ಪ್ರದರ್ಶನ ತೋರಿತು.
ಅಬ್ಬರಿಸಿದ ಹರ್ಮನ್: ಕೇವಲ 22 ಎಸೆತಗಳಲ್ಲಿಯೇ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ ಬಾರಿಸಿದರು. ಇವರು ಮೋನಿಕಾ ಪಟೇಲ್ ಅವರ ಒಂದೇ ಓವರ್ನಲ್ಲಿ 21 ರನ್ ಚಚ್ಚಿದರು. ತಂಡದಲ್ಲಿರುವ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ (24 ಎಸೆತಗಳಲ್ಲಿ ಔಟಾಗದೆ 45) ರನ್ ಗಳಿಸಿದರು. ಇನ್ನೋರ್ವ, ವೆಸ್ಟ್ ಇಂಡೀಸ್ ಬ್ಯಾಟರ್ ಮ್ಯಾಥ್ಯೂಸ್ ಮೊದಲ ಪಂದ್ಯಾವಳಿಯಲ್ಲಿಯೇ ಅರ್ಧಶತಕ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಕೇವಲ ಮೂರು ರನ್‌ಗಳಿಂದ ಅವಕಾಶ ತಪ್ಪಿಸಿಕೊಂಡರು. ಇವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದು, 31 ಎಸೆತಗಳಲ್ಲಿ 47 ರನ್ ಪೇರಿಸಿದರು.