ಮುಂಬೈ (ಮಹಾರಾಷ್ಟ್ರ):ನ್ಯಾಟ್ ಸೀವರ್ ಬ್ರಂಟ್ ಅಜೇಯ ಅರ್ಧಶತಕ ಮತ್ತು ಇಸ್ಸಿ ವಾಂಗ್ ಹ್ಯಾಟ್ರಿಕ್ ನೆರವಿನಿಂದ ಮುಂಬೈ ಇಂಡಿಯನ್ಸ್ ನಾರಿಯರು ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ತಲುಪಿದರು. ಈಗಾಗಲೇ ಅಂತಿಮ ಸುತ್ತು ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಶುಕ್ರವಾರ ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳೆಯರು, ಯುಪಿ ವಾರಿಯರ್ಸ್ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್ಗಳಲ್ಲಿ 4 ವಿಕೆಟ್ಗೆ 182 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಯುಪಿ ತೆವಳುತ್ತಾ ಸಾಗಿ 18 ನೇ ಓವರ್ಗೆ ಎಲ್ಲ ವಿಕೆಟ್ ಕಳೆದುಕೊಂಡು 110 ರನ್ ಮಾತ್ರ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು.
ಸವಾಲು ಪಡೆಯದೆ ಹೊರಬಿದ್ದ ಯುಪಿ:ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಸವಾಲನ್ನು ಮೀರುವಲ್ಲಿ ಯುಪಿ ವಾರಿಯರ್ಸ್ ವಿಫಲವಾಯಿತು. ಒತ್ತಡಕ್ಕೆ ಒಳಗಾದ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಶ್ವೇತಾ ಶೆರಾವತ್ 1 ರನ್ ಗಳಿಸಿ ಔಟಾದರು. ಅಲಿಸ್ಸಿ ಹೀಲಿ 11, ಮೆಕ್ಗ್ರಾಥ್ 7, ಗ್ರೇಸ್ ಹ್ಯಾರೀಸ್ 14, ದೀಪ್ತಿ ಶರ್ಮಾ 16 ರನ್ಗೆ ಸುಸ್ತಾದರು. ಇನ್ನುಳಿದ ಬ್ಯಾಟರ್ಗಳು ಎರಡಂಕಿ ದಾಟಲೂ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ತಂಡದ ಆಟಗಾರ್ತಿಯರು ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ, ಕಿರಣ್ ನವಗಿರೆ ಉತ್ತಮ ಬ್ಯಾಟ್ ಬೀಸಿದರು. 3 ಸಿಕ್ಸರ್, 4 ಬೌಂಡರಿ ಸಮೇತ 43 ರನ್ ಗಳಿಸಿ ಮುಂಬೈ ದಾಳಿಯನ್ನು ಎದುರಿಸಿದರು. ತಂಡದ 5 ನೇ ವಿಕೆಟ್ ಆಗಿ ಕಿರಣ್ ಔಟಾಗುವ ಮೂಲಕ ತಂಡ ಗೆಲುವಿನ ಆಸೆಯನ್ನೇ ಕೈಬಿಟ್ಟಿತು.