ಮುಂಬೈ:ಇಲ್ಲಿಯ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ (ಡಬ್ಲ್ಯೂಪಿಲ್) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಗುಜರಾತ್ ಜೈಂಟ್ಸ್ 11 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಲೀಗ್ನಲ್ಲಿ ಎರಡನೇ ಗೆಲುವು ದಾಖಲಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ಗಿಳಿದ ಗುಜರಾತ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿತು. ಆರಂಭಿಕ ಆಟಗಾರ್ತಿ ಸೋಫಿಯಾ ಕೇವಲ 4 ರನ್ ಕಲೆಹಾಕಿ ಮರಿಜೆನ್ನೆ ಅವರ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಜೊನಾಸೆನ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬಳಿಕ ಕ್ರೀಸ್ಗಿಳಿದ ಡಿಯೋಲ್, ಲಾರಾ ವೋಲ್ವರ್ಡ್ ಜತೆಗೂಡಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. 33 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 31 ರನ್ ಸೇರಿಸಿದ ಡಿಯೋಲ್ 9.5ನೇ ಓವರ್ನಲ್ಲಿ ಜೊನಾಸೆನ್ ಎಸೆತದಲ್ಲಿ ತಾನಿಯಾ ಭಾಟಿಯಾಗೆ ಕ್ಯಾಚ್ ನೀಡಿ ಹೊರನಡೆದರು. ಎರಡನೇ ವಿಕೆಟ್ಗೆ ಈ ಜೋಡಿ 53 ರನ್ ಪೇರಿಸಿತ್ತು.
ಬಳಿಕ ಬಂದ ಗಾರ್ಡ್ನರ್, ಲಾರಾ ಜೋಡಿ ಮೂರನೇ ವಿಕೆಟ್ಗೆ 134 ರನ್ಗಳ ಜೊತೆಯಾಟ ನೀಡಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 45 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 57 ರನ್ ಚಚ್ಚಿದ ಲಾರಾ ವೋಲ್ವರ್ಟ್ 18.4ನೇ ಓವರ್ನಲ್ಲಿ ಅರುಂಧತಿಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ಬದಿಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಸಿದ ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 51 ರನ್ ಸಂಪಾದಿಸಿ ಅರ್ಧಶತಕ ಪೂರೈಸಿದರು. ಡೆಲ್ಲಿ ಪರ ಜೊನಾಸೆನ್ 2, ಮರಿಜೊನ್ನೆ, ಅರುಂಧತಿ ತಲಾ ಒಂದೊಂದು ವಿಕೆಟ್ ಪಡೆದರು.