ಮುಂಬೈ:ಮಹಿಳಾ ಪ್ರೀಮಿಯರ್ ಲೀಗ್ನ ಐದನೇ ಪಂದ್ಯ ಬೆಂಗಳೂರಿನ ವಿರುದ್ಧ ಭರ್ಜರಿ ರನ್ ಗಳಿಸಿ ಗೆಲುವು ಸಾಧಿಸಿದ ಡೆಲ್ಲಿ ಮತ್ತು ಗುಜರಾತ್ ಎದುರು ಕೊನೆಯ ಒಂದು ಬಾಲ್ ಇರುವಂತೆ ಗೆದ್ದು ಬೀಗಿದ ಯುಪಿ ವಾರಿಯರ್ಸ್ ನಡುವೆ ಇಲ್ಲಿನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಕ್ಕೆ ಬ್ಯಾಟಿಂಗ್ ಬಲವಾಗಿದೆ.
ಯುಪಿ ವಾರಿಯರ್ಸ್ ವುಮೆನ್ ಪ್ರೀಮಿಯರ್ ಲೀಗ್ನಲ್ಲಿ ಚೇಸಿಂಗ್ ಮಾಡಿ ಗೆದ್ದ ಮೊದಲ ತಂಡವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಬೆಂಗಳೂರು ವಿರುದ್ಧ 223 ರನ್ ಗಳಿಸಿದ್ದು, ಇದು ಮಹಿಳಾ ಟಿ20 ಕ್ರಿಕೆಟ್ನ ಎಡನೇ ಅತೀ ಹೆಚ್ಚಿನ ರನ್ ಆಗಿದೆ. ಯುಪಿಯ ಆರಂಭಿಕ ಬ್ಯಾಟರ್ಗಳು ಕೈಕೊಟ್ಟರೂ ಮಧ್ಯಮ ಕ್ರಮಾಂಕ ಮೊದಲ ಪಂದ್ಯದಲ್ಲಿ ಕೈ ಹಿಡಿದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಂಡರ್ 19 ವಿಶ್ವಕಪ್ ಗೆಲ್ಲಿಸಿದ್ದ ಶಫಾಲಿ ವರ್ಮಾ ಮೊದಲ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ್ದರು. 45 ಬಾಲ್ನಲ್ಲಿ 84 ರನ್ ಗಳಿಸಿದ್ದರು. ಡೆಲ್ಲಿ ಕ್ಯಾಪ್ಟನ್ ಮೆಗ್ ಲ್ಯಾನಿಂಗ್ (72) ಸಹ ಬಿರುಸಿನ ಬ್ಯಾಟಿಂಗ್ ಮಾಡಿದ್ದರು. ಇಬ್ಬರು 162 ರನ್ಗಳ ಜೊತೆಯಾಟವಾಡಿದ್ದು, ತಂಡ ಬೃಹತ್ ಮೊತ್ತ ಗಳಿಸಲು ಸಹಕಾರವಾಗಿತ್ತು. ಡೆಲ್ಲಿ ಬೆಂಗಳೂರು ವಿರುದ್ಧ ಕೇವಲ 2 ವಿಕೆಟ್ ನಷ್ಟದಲ್ಲಿ 223 ರನ್ಗಳಿಸಿತ್ತು.
ಆರಂಭಿಕರು ಕೈಕೊಟ್ಟರೂ ಕಿರಣ್ ಮತ್ತು ಗ್ರೇಸ್ ಹ್ಯಾರಿಸ್ ಅವರ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ಅನ್ನು ಮಣಿಸಿತ್ತು. ಕಿರಣ್ ನವಗಿರೆ ವಿಕೆಟ್ 43 ಬಾಲ್ನಲ್ಲಿ 53 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ನಂತರ ಬಂದ ಗ್ರೇಸ್ ಹ್ಯಾರಿಸ್ ಕೊನೆಯ ಐದು ಓವರ್ಗಳಲ್ಲಿ 70 ರನ್ ಬೇಕಿದ್ದ ತಂಡಕ್ಕೆ 26 ಬಾಲ್ 59 ರನ್ ಗಳಿಸಿ ಗೆಲುವಿನ ದಡಕ್ಕೆ ಸೇರಿಸಿದ್ದರು.