ಮುಂಬೈ:ಮಹಿಳಾ ಪ್ರೀಮಿಯರ್ ಲೀಗ್ನ(WPL) "ಫೈನಲ್" ಕದನ ಎಂದೇ ಬಿಂಬಿತವಾಗಿದ್ದ ಕೊನೆಯ ಲೀಗ್ ಪಂದ್ಯಗಳಲ್ಲಿ ನಿರೀಕ್ಷೆಯಂತೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿವೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಐದು ವಿಕೆಟ್ಗಳ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ತಲುಪಿತು. ಲೀಗ್ನಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿಯನ್ನು 4 ವಿಕೆಟ್ಗಳಿಂದ ಮಣಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನ ಪಡೆಯಿತು. ಆಡಿದ 8 ಪಂದ್ಯಗಳಲ್ಲಿ ಮುಂಬೈ ಮತ್ತು ಡೆಲ್ಲಿ ತಲಾ 6 ಗೆದ್ದು 2 ರಲ್ಲಿ ಸೋತು 12 ಅಂಕ ಪಡೆದಿವೆ. ಆದರೆ, ನೆಟ್ರನ್ ರೇಟ್ನಲ್ಲಿ ಡೆಲ್ಲಿ ಮುಂಬೈಗಿಂತಲೂ ಮುಂದಿದ್ದ ಕಾರಣ ಫೈನಲ್‌ಗೆ ನೇರ ಪ್ರವೇಶ ಪಡೆಯಿತು.
ಮುಂಬೈ ಇಂಡಿಯನ್ಸ್ +1.711 ರನ್ರೇಟ್ ಹೊಂದಿದ್ದರೆ, ಡೆಲ್ಲಿ +1.856 ಹೊಂದಿದೆ. 2 ನೇ ಸ್ಥಾನ ಪಡೆದ ಮುಂಬೈ ಇಂಡಿಯನ್ಸ್ ಮತ್ತು ಮೂರಲ್ಲಿರುವ ಯುಪಿ ವಾರಿಯರ್ಸ್ ಫೈನಲ್ ತಲುಪಬೇಕಾದರೆ, ಎಲಿಮಿನೇಟರ್ ಪಂದ್ಯವಾಡಿ, ಅಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಡೆಲ್ಲಿ ತಂಡದ ಜೊತೆ ಕಾದಾಡಲಿದೆ. ಮಾರ್ಚ್ 24 ರಂದು ಎಲಿಮಿನೇಟರ್, ಮಾರ್ಚ್ 26 ರಂದು ಫೈನಲ್ ಪಂದ್ಯ ನಡೆಯಲಿದೆ.
ಹ್ಯಾಟ್ರಿಕ್ ಗೆಲುವು ತಡೆದ ಡೆಲ್ಲಿ: ಪಂದ್ಯದಲ್ಲಿ ಡೆಲ್ಲಿ ತಂಡ ಪಾರಮ್ಯ ಮೆರೆಯಿತು. ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಹ್ಯಾಟ್ರಿಕ್ ಜಯದ ಗುರಿಯಲ್ಲಿದ್ದ ಯುಪಿ ವಾರಿಯರ್ಸ್ಗೆ ಡೆಲ್ಲಿ ನಾರಿಯರು ಬ್ರೇಕ್ ಹಾಕಿದರು. ಆಲ್‌ರೌಂಡ್ ಪ್ರದರ್ಶನ ನೀಡಿದ ಅಲಿಸ್ ಕ್ಯಾಪ್ಸಿ 3 ವಿಕೆಟ್ ಕಬಳಿಸಿದರೆ, 34 ರನ್ ಮಾಡಿ ಬ್ಯಾಟಿಂಗ್ನಲ್ಲಿ ನೆರವಾದರು. ಇದು ಕ್ಯಾಪಿಟಲ್ಸ್ ಜಯಕ್ಕೆ ಕಾರಣವಾಯಿತು.