ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಕಪ್ಗಾಗಿ 20 ಪಂದ್ಯಗಳನ್ನು ಆಡಲಿವೆ. ಬಹುನಿರೀಕ್ಷಿತ ಟೈಟಲ್ ಅನ್ನು ಟಾಟಾ ಸಂಸ್ಥೆ ಪ್ರಾಯೋಜಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಅದ್ಧೂರಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಖ್ಯಾತ ಗಾಯಕ ಎಪಿ ಧಿಲ್ಲೋನ್ ಅವರು ಸಂಭ್ರಮಾಚರಣೆಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಗೀತೆ ಹಾಡಲಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.
ಮಹಿಳೆಯರು ಮತ್ತು ಯವತಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ:ಡಿವೈ ಪಾಟೀಲ್ ಕ್ರೀಡಾಂಗಣವು ನಾಳೆ ಭರ್ತಿಯಾಗುವ ನಿರೀಕ್ಷೆ ಇದೆ. ಟಿಕೆಟ್ ಬುಕಿಂಗ್ ಈಗಾಗಲೇ ಆರಂಭಿಸಲಾಗಿದೆ. 100 ರೂ.ಗೆ ಟಿಕೆಟ್ ಮತ್ತು ಮಹಿಳೆಯರಿಗೆ ಮತ್ತು ಯುವತಿಯರಿಗೆ ಉಚಿತ ಟಿಕೆಟ್ ಇರುವ ಬಗ್ಗೆ ಮಹಿಳಾ ಪ್ರೀಮಿಯರ್ ಲೀಗ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ. bookmyshow.com ನಲ್ಲಿ ಮಹಿಳೆಯರು ನೋಂದಾಯಿಸಿಕೊಂಡರೆ ಈ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಪಂದ್ಯಗಳ ಟಿಕೆಟ್‌ಗಳ ಆಫ್‌ಲೈನ್ ಮಾರಾಟದ ಬಗ್ಗೆಯೂ ಬಿಸಿಸಿಐ ಮಾಹಿತಿ ಬಿಡುಗಡೆ ಮಾಡಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸ್ಮೃತಿ ಮಂಧಾನ, ಮುಂಬೈ ಇಂಡಿಯನ್ಸ್ ಅನ್ನು ಭಾರತ ವನಿತೆಯರ ತಂಡದ ನಾಯಕಿ ಹರ್ಮನ್ ಪ್ರಿತ್ ಕೌರ್, ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮೆಗ್ ಲ್ಯಾನಿಂಗ್, ಯುಪಿ ವಾರಿಯರ್ಸ್ ಅನ್ನು ಅಲಿಸ್ಸಾ ಹೀಲಿ ಮತ್ತು ಗುಜರಾತ್ ಜೈಂಟ್ಸ್ ಅನ್ನು ಬೆತ್ ಮೂನಿ ಮುನ್ನಡೆಸಲಿದ್ದಾರೆ. ಡಬ್ಲ್ಯೂಪಿಎಲ್ ಹರಾಜಿನಲ್ಲಿ ಸ್ಮೃತಿ ಮಂಧಾನ ಅತಿ ಹೆಚ್ಚು ಮೊತ್ತಕ್ಕೆ ಆರ್ಸಿಬಿ ತಂಡಕ್ಕೆ ಸೇರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ): ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೆನ್ ವ್ಯಾನ್ ನಿಕೆರ್ಕ್, ಪ್ರೀತಿ ಕೆ ಬೊಹ್ಸೆಮ್, ಕೋಮಲ್ ಜಂಜಾದ್, ಮೇಗನ್ ಶುಟ್, ಸಹನಾ ಪವಾರ್ ಸೇರಿ 18 ಹೆಸರಾಂತ ಆಟಗಾರ್ತಿಯರಿದ್ದಾರೆ.