ಮುಂಬೈ:ಮಹಿಳಾ ಪ್ರೀಮಿಯರ್ ಲೀಗ್ನ(WPL) ಫೈನಲ್ ತಲುಪುವ ಗುರಿಯೊಂದಿಗೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ನಾರಿಯರಿಗೆ, ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಶಾಕ್ ನೀಡಿದ್ದಾರೆ. 9 ವಿಕೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ಡೆಲ್ಲಿ ತಂಡ ಅಗ್ರಸ್ಥಾನಕ್ಕೇರಿತು. ಉಭಯ ತಂಡಗಳಿಗೆ ತಲಾ ಒಂದು ಲೀಗ್ ಪಂದ್ಯ ಬಾಕಿ ಉಳಿದಿದ್ದು ಗೆದ್ದು ಅಗ್ರಸ್ಥಾನ ಪಡೆದವರು ಫೈನಲ್ ತಲುಪಲಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ಗೆ ಅವಕಾಶ ಪಡೆದ ಮುಂಬೈ ಮಹಿಳೆಯರಿಗೆ ಡೆಲ್ಲಿಯ ಸ್ಟಾರ್ ಆಟಗಾರ್ತಿ ಮರಿಜಾನ್ನೆ ಕಾಪ್ ಡಬಲ್ ಸ್ಟ್ರೋಕ್ ನೀಡಿದರು. ಯಾಸ್ಟಿಕಾ ಬಾಟಿಯಾ, ನ್ಯಾಟ್ ಸೀವರ್ ಬ್ರಂಟ್ರ ವಿಕೆಟ್ ಪಡೆದು ಅದ್ಭುತ ಆರಂಭ ಒದಗಿಸಿದರು. ಇದಾದ ಬಳಿಕವೂ ತಂಡ ರನ್ ಕಲೆ ಹಾಕುವಲ್ಲಿ ವಿಫಲವಾಗಿ 8 ವಿಕೆಟ್‌ಗೆ 109 ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್, ಶೆಫಾಲಿ ವರ್ಮಾ, ಅಲಿಸ್ ಕ್ಯಾಪ್ಸಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 9 ಓವರ್‌ಗಳಲ್ಲಿ 110 ರನ್ ಬಾರಿಸಿ ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.
ತ್ರಿಮೂರ್ತಿಗಳಿಂದ ಮುಗಿದ ಆಟ:ಮುಂಬೈ ಇಂಡಿಯನ್ಸ್ ನೀಡಿದ ಅಲ್ಪ ಮೊತ್ತವನ್ನು ಸಲೀಸಾಗಿ ಮುಟ್ಟಲು ಡೆಲ್ಲಿಯ ನಾಯಕಿ ಮೆಗ್ ಲ್ಯಾನಿಂಗ್, ಡ್ಯಾಶಿಂಗ್ ಬ್ಯಾಟರ್ ಶೆಫಾಲಿ ವರ್ಮಾ, ಅಲಿಸಾ ಕ್ಯಾಪ್ಸಿ ಕಾರಣರಾದರು. ಆರಂಭದಿಂದಲೇ ಮುಂಬೈ ಬೌಲಿಂಗ್ ಪಡೆ ಮೇಲೆ ಮುಗಿಬಿದ್ದರು. ಮೆಗ್ ಲ್ಯಾನಿಂಗ್ 22 ಎಸೆತಗಳಲ್ಲಿ ಔಟಾಗದೆ 32, ಶೆಫಾಲಿ ವರ್ಮಾ 15 ಎಸೆತಗಳಲ್ಲಿ 33 ರನ್ ಬಾರಿಸಿ ಮೊದಲ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದರು. ಇಬ್ಬರೂ ಸೇರಿ 10 ಬೌಂಡರಿ 2 ಸಿಕ್ಸರ್ ಸಿಡಿಸಿದರು.
ಶೆಫಾಲಿ ವರ್ಮಾ ಔಟಾದ ಬಳಿಕ ಬಂದ ಆಲಿಸಾ ಕ್ಯಾಪ್ಸಿ ಬಿರುಸಿನ ಬ್ಯಾಟ್ ಮಾಡಿ 5 ಸಿಕ್ಸರ್, 1 ಬೌಂಡರಿಸಮೇತ 17 ಎಸೆತಗಳಲ್ಲಿ 38 ರನ್ ಬಾರಿಸಿ ಗೆಲುವು ತಂದುಕೊಟ್ಟರು. ಇದರಿಂದ ತಂಡವು 66 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ, ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿತು.