ನವದೆಹಲಿ: ಮುಂಬೈ ಇಂಡಿಯನ್ಸ್ ಮುಂದಿನ ವರ್ಷದ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಹೊಸ ನಾಯಕನನ್ನು ಶುಕ್ರವಾರ ಘೋಷಿಸಿದೆ. ಹೀಗಾಗಿ 2024ರ ಆವೃತ್ತಿಯ ನಂತರ ಎಂಐನ ಯಶಸ್ವಿ ನಾಯಕ ಲೀಗ್ ಕ್ರಿಕೆಟ್ನಿಂದ ದೂರ ಉಳಿಯುತ್ತಾರೆ ಎಂದು ಹೇಳಲಾಗುತ್ತದೆ. ಐಪಿಎಲ್ನಲ್ಲಿ ರೋಹಿತ್ ಶರ್ಮಾ 11 ಆವೃತ್ತಿಗಳಲ್ಲಿ ಮುಂಬೈ ನಾಯಕತ್ವ ವಹಿಸಿದ್ದು ಐದು ಟ್ರೋಫಿಗಳನ್ನು ಗೆದ್ದಿದ್ದಾರೆ.
ರೋಹಿತ್ ಶರ್ಮಾಗೆ 2024ರ ಐಪಿಎಲ್ ಕೊನೆಯದಾಗುವ ಸಾಧ್ಯತೆ ಇದೆ ಎನ್ನಲು ಪ್ರಮುಖ ಕಾರಣವಿದೆ. 2025ರ ಮೆಗಾ ಹರಾಜಿನ ವೇಳೆಗೆ ಎಂಐ ಶರ್ಮಾರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಗೋಚರಿಸುತ್ತಿದೆ. ಮೆಗಾ ಹರಾಜಿಗೂ ಮುನ್ನ ಒಂದು ತಂಡ 3 ಭಾರತೀಯರು ಮತ್ತು 1 ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. 2025ಕ್ಕೆ ಮುಂಬೈ ಇಂಡಿಯನ್ಸ್ ಭಾರತೀಯ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಂತಿದೆ.
ಯಶಸ್ವಿ ನಾಯಕನಿಗೆ ಈ ರೀತಿಯ ವಿದಾಯವೇ?:2013ರಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ನಂತರ ಮುಂಬೈ ಇಂಡಿಯನ್ಸ್ ಚಾರ್ಮ್ ಬದಲಾಯಿತೆಂದರೆ ತಪ್ಪಾಗದು. ನಾಯಕತ್ವದ ಚೊಚ್ಚಲ ವರ್ಷವೇ ಅವರು ಪ್ರಶಸ್ತಿ ಗೆದ್ದುಕೊಟ್ಟರು. ನಂತರ ಒಂದೊಂದು ವರ್ಷಗಳ ಅಂತರದಲ್ಲಿ ತಂಡ ಪ್ರಶಸ್ತಿಗಳನ್ನು ಜಯಿಸಿತು. ಆದರೆ ಮುಂಬೈ ಇಂಡಿಯನ್ಸ್ ನಾಯಕತ್ವದ ಬದಲಾವಣೆಗೆ ವೇಳೆ ರೋಹಿತ್ ಬಗ್ಗೆ ಉತ್ತಮ ನಾಯಕ ಎಂದಿದ್ದು ಬಿಟ್ಟರೆ ಮತ್ತೇನೂ ಹೇಳಲೇ ಇಲ್ಲ.