ಪಾಟ್ನಾ (ಬಿಹಾರ):ನಾಳೆಯಿಂದ ಏಕದಿನ ವಿಶ್ವಕಪ್2023 ಸರಣಿ ಪಂದ್ಯಾವಳಿಗಳು ಆರಂಭಗೊಳ್ಳಲಿವೆ. ಈಗಾಗಲೇ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡಿ ವಿಶ್ವಕಪ್ ಬೇಟೆಗೆ ಸಿದ್ಧವಾಗಿವೆ. ಭಾರತ ತಂಡ ಕೂಡ ಇದಕ್ಕಾಗಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಬೌಲಿಂಗ್, ಬ್ಯಾಟಿಂಗ್ ವಿಭಾಗದಲ್ಲೂ ಭಾರತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಹೊಸಬರಿಗೆ ಮಣೆಹಾಕಿದೆ. ಇಶಾನ್ ಕಿಶನ್, ಮೊಹ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಬಾರಿಯ ವಿಶ್ವಕಪ್ ದೇಶಕ್ಕೆ ಮಾತ್ರವಲ್ಲದೆ ಬಿಹಾರಕ್ಕೂ ಕೂಡ ವಿಶೇಷವಾಗಿದೆ. ಕಾರಣ ಬಿಹಾರ ರಾಜಧಾನಿ ಪಾಟ್ನಾ ಮೂಲದ ಯುವ ಕ್ರಿಕೆಟರ್ ಇಶಾನ್ ಕಿಶನ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದು, ಬಿಹಾರಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಬಗ್ಗೆ ಅವರ ಪೋಷಕರು ಈಟಿವಿ ಭಾರತದೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಇಶಾನ್ ಕಿಶನ್ ಉತ್ತಮ ಪ್ರದರ್ಶನ ತೋರುವುದು ಮಾತ್ರವಲ್ಲದೆ, ನವೆಂಬರ್ 19 ರಂದು ಭಾರತ ವಿಶ್ವಕಪ್ ಟ್ರೋಫಿಯನ್ನು ಮತ್ತೊಮ್ಮೆ ಎತ್ತಿಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಶಾನ್ ಕಿಶನ್ ಅವರ ತಂದೆ ಪ್ರಣವ್ ಪಾಂಡೆ ಅವರು, ಇಶಾನ್ ಬಳಿ ಸಾಕಷ್ಟು ಕೌಶಲ್ಯಗಳಿವೆ. ಆತ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಇತ್ತೀಚೆಗೆ ನಡೆದ ಏಷ್ಯಾಕಪ್ ಸರಣಿಯ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿತ್ತು. ಕೇವಲ 66 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಆಸರೆಯಾಗಿದ್ದರು. ಇಬ್ಬರು ಅತ್ಯತ್ತಮ ಜತೆಯಾಟವಾಡಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದಲ್ಲಿ ಇಶಾನ್ ಕಿಶನ್ 81 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಮೇತ 82 ರನ್ಗಳ ಬಾರಿಸಿ ಅಲ್ಪಮೊತ್ತದ ಕುಸಿತದಿಂದ ತಂಡವನ್ನು ಪಾರು ಮಾಡಿದ್ದರು. ಇದರ ಹೊರತಾಗಿಯೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾನೆ ಎಂದು ತಂದೆ ಪ್ರಣವ್ ಪಾಂಡೆ ಹೇಳಿದರು.