ಲಕ್ನೋ (ಉತ್ತರ ಪ್ರದೇಶ):2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಭಿಯಾನದಲ್ಲಿ ಆಡಿರುವ ಆರು ಪಂದ್ಯಗಳ ಪೈಕಿ ಐದು ಸೋಲು ಕಂಡಿರುವ ಇಂಗ್ಲೆಂಡ್ ಸೆಮೀಸ್ನಿಂದ ಭಾಗಶಃ ಹೊರಬಿದ್ದಿದೆ. ಪವಾಡ ನಡೆದರೆ ಮಾತ್ರ ಅದಕ್ಕೊಂದು ಅವಕಾಶ ಸಿಗಬಹುದಷ್ಟೇ. ಇದಷ್ಟೇ ಅಲ್ಲ, ಕಳಪೆ ಪ್ರದರ್ಶನದಿಂದ ದೊಡ್ಡ ಮೊತ್ತದ ಬೆಲೆ ತೆತ್ತಿರುವ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್, 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವುದು ಕೂಡ ಅನುಮಾನ. ಈಗಿನ ಅಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯದ ಹೊರತು ಕನಸಿನ ಮಾತು.!
ಇಂಗ್ಲೆಂಡ್ ತಂಡದ ಮುಖ್ಯ ತರಬೇತುದಾರ ಮ್ಯಾಥ್ಯೂ ಮೋಟ್ ಕೂಡ ಇದೇ ವಿಚಾರವನ್ನು ಬೇಸರದಿಂದ ಹೇಳಿಕೊಂಡಿದ್ದಾರೆ. ''ಐಸಿಸಿ ಅರ್ಹತೆಯೊಂದಿಗೆ ನಿಯಮಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸುತ್ತದೆ. ನಿಜ ಹೇಳಬೇಕೆಂದರೆ, ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರದು. ಈವರೆಗೆ ನಾವು ಆಡಿದ ರೀತಿಯಲ್ಲಿ ಅದು ದೊಡ್ಡ ವಿಷಯವೇ ಅಲ್ಲ. ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಉತ್ತಮ ಪ್ರದರ್ಶನದೊಂದಿಗೆ ಪುಟಿದೇಳಬೇಕಿದೆ. ಆದರೆ, ಈಗಿನ ಪ್ರಯತ್ನದಲ್ಲಿ ನಾವು ಅಂಕ ಪಟ್ಟಿಯಲ್ಲಿ ಮೇಲೆ ಬರಲು ಸಾಧ್ಯವಿಲ್ಲ. ಸೆಮಿಫೈನಲ್ಸ್ ಭರವಸೆಗಳು ಮುಗಿದು ಹೋಗಿವೆ. ನಮ್ಮ ನೆಟ್ ರನ್‌ರೇಟ್ ಮತ್ತು ಇನ್ನೂ ಅನೇಕ ತಂಡಗಳನ್ನು ಎದುರಿಸಬೇಕಾಗಿರುವುದರಿಂದ ನಾವು ಗೌರವಕ್ಕಾಗಿ ಮಾತ್ರ ಆಡಬಹುದು'' ಎಂದರು.