ಕೊಲಂಬೊ (ಶ್ರೀಲಂಕಾ): ಮುಂಬರುವ ಏಕದಿನ ವಿಶ್ವಕಪ್‌ಗೆ ಶ್ರೀಲಂಕಾ ತನ್ನ 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಿದ್ದು, ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗಾ ತಂಡದಿಂದ ಹೊರಗುಳಿದಿದ್ದಾರೆ. ಐಸಿಸಿಯ ಕಟ್-ಆಫ್ ದಿನಾಂಕಕ್ಕೆ (ಸೆಪ್ಟೆಂಬರ್ 28) ಕೇವಲ ಎರಡು ದಿನಗಳ ಮೊದಲು ಶ್ರೀಲಂಕಾ ತನ್ನ ತಂಡವನ್ನು ಪ್ರಕಟಿಸಿದೆ. ದಸುನ್ ಶನಕ ಅವರ ನಾಯಕತ್ವದ ಪಾತ್ರವನ್ನು ಮುಂದುವರೆಸಲಿದ್ದಾರೆ ಮತ್ತು ಕುಸಾಲ್ ಮೆಂಡಿಸ್ ಅವರು ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಹಸರಂಗ ಒಬ್ಬರನ್ನು ಹೊರತುಪಡಿಸಿ ತಂಡವು ಅವರ ಬಹುಪಾಲು ಪ್ರಮುಖ ಆಟಗಾರರನ್ನು ಹೊಂದಿದೆ. ಲೆಗ್ ಸ್ಪಿನ್ನರ್ ಕಳೆದ ತಿಂಗಳು ಲಂಕಾ ಪ್ರೀಮಿಯರ್ ಲೀಗ್‌ನ ಪ್ಲೇಆಫ್‌ನಲ್ಲಿ ತೊಡೆ ಭಾಗದ ಸೋವಿಗೆ ತುತ್ತಾಗಿದ್ದರು. ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್ ಆಗಿರುವ ಅವರು ತಂಡದಲ್ಲಿ ಇಲ್ಲದಿರುವುದು ವಿಶ್ವಕಪ್ನಲ್ಲಿ ಬಹಳ ದೊಡ್ಡ ನಷ್ಟವೆಂದೇ ಪರಿಗಣಿಸಬಹುದಾಗಿದೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ವನಿಂದು ಹಸರಂಗ 279 ರನ್ ಗಳಿಸಿದ್ದಲ್ಲದೇ, 19 ವಿಕೆಟ್ ಪಡೆದಿದ್ದರು. ಗಾಯದ ಕಾರಣ ಹಸರಂಗ ಏಷ್ಯಾಕಪ್ನಿಂದಲೂ ಹೊರಗುಳಿದಿದ್ದರು.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಸರಂಗ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಬಗ್ಗೆ ಈ ಮೊದಲು ಹೇಳಿತ್ತು. ಆದರೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸ್ಟಾರ್ ಸ್ಪಿನ್ನರ್ ಕನಿಷ್ಠ ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಇರುವಂತೆ ವೈದ್ಯಕೀಯ ಸಲಹೆ ನೀಡಿದೆ. ಈ ವರ್ಷದ ಆರಂಭದಲ್ಲಿ ಜೂನ್ ಮತ್ತು ಜುಲೈನಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಹಸರಂಗ ಪ್ರಮುಖ ಪಾತ್ರ ವಹಿಸಿದ್ದರು. ಅವರು ಕೇವಲ ಏಳು ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಾವಳಿಯ ಟಾಪ್ ವಿಕೆಟ್-ಟೇಕರ್ ಅಗಿದ್ದರು.