ಇಂದೋರ್ (ಮಧ್ಯಪ್ರದೇಶ): ಹೈದರಾಬಾದ್‌ಗೆ ರಾಷ್ಟ್ರೀಯ ತಂಡದ ಪ್ರಯಾಣ ವಿಳಂಬದ ಬಗ್ಗೆ ಪಿಸಿಬಿ ಜಾಗತಿಕ ಸಂಸ್ಥೆಯೊಂದಿಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಕೆಲ ಗಂಟೆಗಳ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಏಕದಿನ ವಿಶ್ವಕಪ್‌ಗಾಗಿ ಸೋಮವಾರ ಭಾರತೀಯ ವೀಸಾಗಳನ್ನು ನೀಡಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಖಚಿತಪಡಿಸಿದೆ. ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಾಕಿಸ್ತಾನದ ಅಭ್ಯಾಸ ಪಂದ್ಯವನ್ನು ಭದ್ರತಾ ಕಾರಣಗಳಿಂದ ಪ್ರೇಕ್ಷಕರಿಗೆ ಅವಕಾಶ ನೀಡದೇ ಆಡಿಸಲಾಗುವುದು ಎಂದು ಬಿಸಿಸಿಐ ದೃಢಪಡಿಸಿದೆ.
"ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯವು ಭದ್ರತಾ ಏಜೆನ್ಸಿಗಳ ಸಲಹೆಯಂತೆ ಪ್ರೇಕ್ಷಕರಿಗೆ ಅವಕಾಶ ನೀಡದೇ ಆಡಿಸಲಾಗುವುದು. ಹೈದರಾಬಾದ್‌ನಲ್ಲಿನ ಪಂದ್ಯ ಮತ್ತು ಹಬ್ಬ ಒಂದೇ ದಿನ ಇರುವುದರಿಂದ ಭದ್ರತಾ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಸಂಪೂರ್ಣ ಮರುಪಾವತಿ ಮಾಡಲಾಗುವುದು" ಎಂದು ಬಿಸಿಸಿಐ ಸೋಮವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದೆ.
ಭಾರತಕ್ಕೆ ಪಾಕಿಸ್ತಾನ ಪ್ರಯಾಣಿಸುವ 48 ಗಂಟೆಗಳ ಒಳಗೆ ವೀಸಾ ಕ್ಲಿಯರೆನ್ಸ್ ನೀಡಲಾಗಿದೆ. ಪಾಕಿಸ್ತಾನ ತಂಡವು ಸೆಪ್ಟೆಂಬರ್ 27ರ ಮುಂಜಾನೆ ಭಾರತಕ್ಕೆ ಪ್ರಯಾಣಿಸಲಿದೆ. ಅವರು ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಅಭ್ಯಾಸ ಪಂದ್ಯವನ್ನು ಆಡುತ್ತಾರೆ. ಪಾಕಿಸ್ತಾನಕ್ಕೆ ವೀಸಾಗಳನ್ನು ನೀಡಲಾಗಿದೆ," ಐಸಿಸಿ ವಕ್ತಾರರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಮಾಹಿತಿ ನೀಡಿದ್ದಾರೆ.