ಪುಣೆ (ಮಹಾರಾಷ್ಟ್ರ):ವಿಶ್ವಕಪ್ಗೂ ಮುನ್ನ ಶ್ರೀಲಂಕಾದಲ್ಲಿ ಟಿ20 ಲೀಗ್ ನಡೆದ ಕಾರಣ ಗಾಯಾಳುಗಳ ಸಮಸ್ಯೆ ಎದುರಿಸಿತ್ತು. ಇದರಿಂದ 15 ಸದಸ್ಯರ ತಂಡ ಪ್ರಕಟಿಸಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೆಣಗಾಡಿತ್ತು. ಅದರಲ್ಲೂ ಪ್ರಮುಖ ಆಲ್ರೌಂಡರ್ ವನಿಂದು ಹಸರಂಗ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ವಿಶ್ವಕಪ್ಗಾಗಿ ಭಾರತಕ್ಕೆ ಪ್ರವಾಸ ಮಾಡಿದ 15 ಜನ ಸದಸ್ಯರಲ್ಲೇ ಮೂವರು ಆಟಗಾರರು ಗಾಯಗೊಂಡಿದ್ದು, ಗೆಲುವಿಗಾಗಿ ಹವಣಿಸುತ್ತಿರುವ ಸಿಂಹಳಿಯರಿಗೆ ಇದರಿಂದ ದೊಡ್ಡ ಹಿನ್ನಡೆ ಆಗಿದೆ.
ಎಡ-ತೊಡೆಯ ಸ್ನಾಯುವಿನ ಗಾಯದಿಂದಾಗಿ ತಮ್ಮ ಇನ್ ಫಾರ್ಮ್ ವೇಗದ ಬೌಲರ್ ಲಹಿರು ಕುಮಾರ ಅವರು ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023 ರ ಮಾರ್ಕ್ಯೂ ಈವೆಂಟ್‌ನಿಂದ ಹೊರಗುಳಿದಿದ್ದಾರೆ. ಪಂದ್ಯಾವಳಿಯ ಉಳಿದ ಭಾಗಕ್ಕೆ ಅವರ ಬದಲಿಗೆ ಮತ್ತೊಬ್ಬ ವೇಗದ ಬೌಲರ್ ದುಷ್ಮಂತ ಚಮೀರ ಅವರನ್ನು ನೇಮಿಸಲಾಗಿದೆ.
ಸೋಮವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸ್ಟೇಡಿಯಂನಲ್ಲಿ ಶ್ರೀಲಂಕಾ ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಮುಖಾಮುಖಿ ಪಂದ್ಯದ ಮೊದಲು ತರಬೇತಿ ಅವಧಿಯಲ್ಲಿ ಲಹಿರು ಕುಮಾರ ಎಡತೊಡೆಗೆಯ ಗಾಯಕ್ಕೆ ತುತ್ತಾದರು. ಅವರ ಸ್ಥಾನಕ್ಕೆ ಸಹ ವೇಗಿ ದುಷ್ಮಂತ ಚಮೀರಾ ಅವರನ್ನು ಸೇರಿಸಿಕೊಳ್ಳಲಾಗಿದೆ.
ಚಮೀರಾ ಸೇರ್ಪಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಈವೆಂಟ್ ಟೆಕ್ನಿಕಲ್ ಕಮಿಟಿ ಭಾನುವಾರ ಅನುಮೋದನೆ ನೀಡಿದೆ. "ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಈವೆಂಟ್ ತಾಂತ್ರಿಕ ಸಮಿತಿಯು ಶ್ರೀಲಂಕಾ ತಂಡದಲ್ಲಿ ಲಹಿರು ಕುಮಾರ ಬದಲಿಗೆ ದುಷ್ಮಂತ ಚಮೀರಾ ಅವರನ್ನು ಅನುಮೋದಿಸಿದೆ" ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.