ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಯುವ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ತಮ್ಮ ಆಟದಿಂದ ಮಿಂಚುತ್ತಿದ್ದಾರೆ. ಕ್ರಿಕೆಟ್ ಪ್ರೀತಿಯನ್ನು ಹೊಂದಿದ್ದ ರಚಿನ್ ರವೀಂದ್ರ ಅವರ ಪೋಷಕರು ಮಗ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲಿ ಎಂಬ ಆಶೋತ್ತರದಿಂದ ಭಾರತದ ಮಾಜಿ ಆಟಗಾರ, ಬ್ಯಾಟಿಂಗ್ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಮತ್ತು ಪ್ರಸ್ತುತ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೇರಿಸಿ "ರಚಿನ್" ಎಂದು ನಾಮಕರಣ ಮಾಡಿದರು. ಎಡಗೈ ಬ್ಯಾಟರ್ ಮತ್ತು ಬೌಲರ್ ಆಗಿ ಕಿವೀಸ್ ತಂಡಕ್ಕೆ ವಿಶ್ವಕಪ್ ಪಂದ್ಯಗಳಲ್ಲಿ ಮೂರು ಶತಕ ಮತ್ತು 2 ಅರ್ಧಶತಕದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
23 ವರ್ಷದ ಉದಯೋನ್ಮುಖ ಆಟಗಾರ ರಚಿನ್ ರವೀಂದ್ರ ಕಿವೀಸ್ ತಂಡದ ಫ್ಯೂಚರ್ ಸ್ಟಾರ್ ಎಂಬುದರಲ್ಲಿ ಅನುಮಾನ ಇಲ್ಲ. ವಿಶ್ವಕಪ್‌ನಲ್ಲಿ ರಚಿನ್ ಕೇನ್ ವಿಲಿಯಮ್ಸನ್ ಜಾಗದಲ್ಲಿ ಮೈದಾನಕ್ಕಿಳಿದು ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿಕೊಟ್ಟರು. ಮುಂದಿನ ದಿನಗಳಲ್ಲಿ ಈ ಯುವ ಪ್ರತಿಭೆ ಕಿವೀಸ್ ತಂಡದ ಪರವಾಗಿ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂಬ ನಿರೀಕ್ಷೆ ಇದೆ.
ಈ ಕಿವೀಸ್ನ ಸ್ಟಾರ್ ಆಟಗಾರ ಕನ್ನಡಿಗ ಎಂದೇ ನಾವು ಕರೆಯಬಹುದು. ರಚಿನ್ ಅವರ ಪೋಷಕರು ಮೂಲತಃ ಕರ್ನಾಟಕದವರು. ಅವರ ಅಜ್ಜ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 1997ರಲ್ಲಿ ರಚಿನ್ ಪೋಷಕರು ಉದ್ಯೋಗ ನಿಮಿತ್ತ ನ್ಯೂಜಿಲೆಂಡ್‌ಗೆ ಪ್ರಯಾಣಿಸಿ ಅಲ್ಲೇ ವಾಸವಾದರು. 1999ರಲ್ಲಿ ರಚಿನ್ ಅಲ್ಲೇ ಜನಿಸಿದರು. ಅವರ ಕುಟುಂಬ ಈಗ ಅಲ್ಲಿನ ನಾಗರಿಕರಾಗಿದ್ದಾರೆ.
ಭಾರತ ಚಾಂಪಿಯನ್ ಆಗಲಿ:2023ರ ವಿಶ್ವಕಪ್‌ನಲ್ಲಿ ರಚಿನ್ ರವೀಂದ್ರ ಅವರ ಅಜ್ಜ ಭಾರತ ತಂಡವನ್ನು ನೋಡಲು ಬಯಸುತ್ತಾರೆ. ಅಲ್ಲದೇ ನ್ಯೂಜಿಲೆಂಡ್ ಭಾರತದ ಎದುರಾಳಿ ಆಗಬೇಕು ಎನ್ನುವುದು ಅವರ ಇಚ್ಛೆ ಆಗಿದೆ. "ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ಉತ್ತಮವಾಗಿ ಆಡಿದೆ. ಅವರು ಇಲ್ಲಿಯವರೆಗೆ ಆಡಿದ ಪ್ರತಿ ಪಂದ್ಯವನ್ನು ಗೆದ್ದಿದ್ದಾರೆ. ನ್ಯೂಜಿಲೆಂಡ್ ಮತ್ತು ಭಾರತ ಫೈನಲ್‌ನಲ್ಲಿ ಆಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಆ ಪಂದ್ಯ ರಚಿನ್ ರವೀಂದ್ರ ಉತ್ತಮವಾಗಿ ಆಡಲಿ, ಟೀಂ ಇಂಡಿಯಾ ಚಾಂಪಿಯನ್ ಆಗಲಿ ಎಂದು ಆಶಿಸುತ್ತೇನೆ" ಎಂದು ಬಾಲಕೃಷ್ಣ ಹೇಳಿದ್ದಾರೆ.
ಸಚಿನ್, ದ್ರಾವಿಡ್ ಅವನಿಗೆ ಇಷ್ಟ:ಮೊಮ್ಮಗನ ಕ್ರಿಕೆಟ್ ಪ್ರೀತಿಯ ಹುಟ್ಟಿನ ಬಗ್ಗೆ ಮತ್ತು ಕಲಿಕೆ ಬಗ್ಗೆ ಮಾತನಾಡಿದ ಅವರು," ರಚಿನ್ಗೆ ಅವರ ತಂದೆ ರವಿ ಕೃಷ್ಣಮೂರ್ತಿ ಅವರೇ ಮೊದಲ ಗುರು. ರವಿ ಕೃಷ್ಣಮೂರ್ತಿ ಅವರು ಕ್ಲಬ್ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿದ್ದರು. ಅವರು ಕ್ಲಬ್ನಲ್ಲಿ ತರಬೇತಿ ನೀಡುತ್ತಾರೆ. ಅವರು ತಮ್ಮ ತಂದೆಯೊಂದಿಗೆ ಕ್ಲಬ್ ಕ್ರಿಕೆಟ್ ಪಂದ್ಯಗಳಿಗಾಗಿ ವಿವಿಧ ರಾಜ್ಯಗಳಿಗೆ ತೆರಳಿದ್ದ. ಅಲ್ಲಿಂದ ಅವನಿಗೆ ಕ್ರಿಕೆಟ್ ಮೇಲಿನ ಪ್ರೀತಿ ಬೆಳೆಯಿತು. ಅದರಂತೆ ಅವನಿಗೆ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಒಟ್ಟಿಗೆ ಸೇರಿಸಿ ನಾಮಕರಣ ಮಾಡಲಾಯಿತು. ಅವನಿಗೆ ಈ ಇಬ್ಬರು ದಿಗ್ಗಜರು ಅಚ್ಚುಮೆಚ್ಚಿನವರು" ಎಂದು ವಿವರಿಸಿದ್ದಾರೆ.
ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 96 ಬಾಲ್ನಿಂದ 123 ರನ್ಅನ್ನು ರಚಿನ್ ಕಲೆಹಾಕಿದ್ದರು. ಇದು ಅವರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಚೊಚ್ಚಲ ಶತಕವಾಗಿತ್ತು. ಇವರ ಆಟವನ್ನು ಕಂಡ ಭಾರತ ತಂಡದ ಕೋಚ್ ದ್ರಾವಿಡ್ ಹೊಗಳಿಕೆಯ ಮಾತುಗಳನ್ನು ಆಡಿದ್ದರು.