ಅಹಮದಾಬಾದ್ (ಗುಜರಾತ್): ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 400+ ರನ್ ಗಳಿಸಿದ ಭಾರತದ ಮೊದಲ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಫೈನಲ್ನಲ್ಲಿ ಅರ್ಧಶತಕ ಗಳಿಸುವ ಮೂಲಕ ಕೋಚ್ ದ್ರಾವಿಡ್ ಅವರ ದಾಖಲೆ ಮುರಿದಿದ್ದಾರೆ.
ಕೆಎಲ್ ರಾಹುಲ್ 2023ರ ವಿಶ್ವಕಪ್‌ನಲ್ಲಿ 10 ಇನ್ನಿಂಗ್ಸ್‌ಗಳನ್ನು ಆಡಿದ್ದು, 75.33 ಸರಾಸರಿಯಲ್ಲಿ 90.76 ಸ್ಟ್ರೈಕ್ ರೇಟ್‌ನೊಂದಿಗೆ 452 ರನ್ ಗಳಿಸಿದ್ದಾರೆ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ 9 ಪಂದ್ಯಗಳಲ್ಲಿ 71.00 ಸರಾಸರಿಯಲ್ಲಿ 355 ರನ್ ಗಳಿಸಿ ಭಾರತದ ಪರ ಐದನೇ ಸ್ಥಾನದಲ್ಲಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಭಾರತದ ಮಾಜಿ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೇಟ್ ಕೀಪರ್ ಆಗಿ 15 ವಿಕೆಟ್ಗಳನ್ನು ಪಡೆದಿದ್ದರು. 2023ರಲ್ಲಿ ಕೆಎಲ್ ರಾಹುಲ್ ವಿಕೆಟ್‌ಕೀಪರ್ ಆಗಿ 17 ವಿಕೆಟ್ಗಳನ್ನು ಪಡೆದು ದಾಖಲೆ ಬರೆದಿದ್ದಾರೆ.
ರಾಹುಲ್ ವಿಶ್ವಕಪ್‌ನಲ್ಲಿ 1 ಶತಕ ಮತ್ತು ಎರಡು ಅರ್ಧಶತಕ ಗಳಿಸಿದ್ದಾರೆ. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ರಾಹುಲ್ ಗಳಿಸಿದ 97 ರನ್ ಅತ್ಯಮೂಲ್ಯ ಸಮಯದಲ್ಲಿ ಬಂದಿತ್ತು. 5ನೇ ಆಟಗಾರರಾಗಿ ಬ್ಯಾಟಿಂಗ್ಗೆ ಬಂದು ರಾಹುಲ್ ತಂಡದಲ್ಲಿ ಫಿನಿಶರ್ ಆಗಿಯೂ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ ಆರಂಭಕ್ಕೂ ಮುನ್ನ ಮಧ್ಯಮ ಕ್ರಮಾಂಕದಲ್ಲಿದ್ದ ಕೊರತೆಯನ್ನು ರಾಹುಲ್ ನೀಗಿಸಿದರು.
ಡಿಆರ್ಎಸ್ ನಿರ್ಧಾರಗಳಲ್ಲಿ ಮೆಚ್ಚುಗೆ:ವಿಕೆಟ್ ಹಿಂದೆ ನಿಂತು ರಾಹುಲ್ ಡಿಆರ್ಎಸ್ ನಿಯಮಗಳ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಹುಲ್ ನಿರ್ಧಾರವನ್ನು ನಾಯಕ ರೋಹಿತ್ ಶರ್ಮಾ ಸಹ ಒಪ್ಪಿಕೊಳ್ಳುತ್ತಿದ್ದರು. ಧೊನಿಯಂತೆ ಡಿಆರ್ಎಸ್ನಲ್ಲಿ ಖಚಿತವಾಗಿ ಹೇಳುವ ರಾಹುಲ್ ನಿರ್ಣಯ ಮೆಚ್ಚುಗೆಗೆ ಪಾತ್ರವಾಗಿತ್ತು.
ರಾಹುಲ್ ಕಮ್ಬ್ಯಾಕ್: ವರ್ಷದ ಆರಂಭದಲ್ಲಿ ಕೆಎಲ್ ರಾಹುಲ್ ಪ್ರದರ್ಶನಕ್ಕೆ ಹಲವಾರು ಟೀಕೆಗಳು ಬಂದಿದ್ದವು. ಟೆಸ್ಟ್ ತಂಡದ ಉಪನಾಯಕನಾಗಿದ್ದ ರಾಹುಲ್ ಇನ್ನಿಂಗ್ಸ್ ಕಟ್ಟುವಲ್ಲಿ ಪರದಾಡುತ್ತಿದ್ದರು. ಅಲ್ಲದೇ ಶ್ರೀಕರ್ ಭರತ್ ಅವರು ತಂಡದ ಪ್ರಮುಖ ಕೀಪರ್ ಆಗಿದ್ದರು. ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಟೆಸ್ಟ್ನ ಮೂರು ಇನ್ನಿಂಗ್ಸ್ನಲ್ಲಿ ನೀಡಿದ ಕಳೆಪೆ ಪ್ರದರ್ಶನದಿಂದ ಉಪನಾಯಕನ ಪಟ್ಟವನ್ನು ಕಳೆದುಕೊಂಡಿದ್ದರು. ಅಲ್ಲದೇ ಮೂರನೇ ಟೆಸ್ಟ್ನಿಂದ ಅವರನ್ನು ಕೈಬಿಡಲಾಗಿತ್ತು.
ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಗಾಯಕ್ಕೆ ತುತ್ತಾದ ರಾಹುಲ್ ವಿದೇಶಕ್ಕೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಏಷ್ಯಾಕಪ್ಗೆ ತಂಡಕ್ಕೆ ಮರಳಿದರು. ಎನ್ಸಿಎಯಲ್ಲಿ ಚೇತರಿಸಿಕೊಳ್ಳುತ್ತಿರುವಾಗಲೇ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ಮತ್ತು ವಿಕೆಟ್ ಕೀಪಿಂಗ್ ಬಗ್ಗೆ ಅವರಿಗೆ ತಿಳಿಸಲಾಗಿತ್ತು ಎಂದೇ ಹೇಳಬಹುದು. ಏಷ್ಯಾಕಪ್ಗೆ ತಂಡಕ್ಕೆ ಬಂದ ಅವರು ಮಧ್ಯಮ ಕ್ರಮಾಂಕದ ಜೊತೆಗೆ ವಿಕೆಟ್ ಕೀಪರ್ ಆಗಿ ಕಮ್ಬ್ಯಾಕ್ ಮಾಡಿದರು. ವಿಶ್ವಕಪ್‌ನಲ್ಲಿ ಅನುಭವಿ ಆಟಗಾರನಾಗಿ ಅಗತ್ಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಇನ್ಸ್ಟಾ ಪೋಸ್ಟ್ ವೈರಲ್, ಕ್ರಿಕೆಟ್ ಅಭಿಮಾನಿಗಳು ಗರಂ