ನವದೆಹಲಿ:ಏಳು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿದ್ದ ಪಾಕಿಸ್ತಾನ ಸೋಮವಾರ ತನ್ನ ಎಂಟನೇ ಮುಖಾಮುಖಿಯಲ್ಲಿ ಎಡವಿ ಬಿತ್ತು. 2023ರ ವಿಶ್ವಕಪ್‌ನಲ್ಲಿ ಐದು ಪಂದ್ಯಗಳನ್ನು ಆಡಿರುವ ಪಾಕಿಸ್ತಾನಕ್ಕೆ ಎರಡರಲ್ಲಿ ಗೆದ್ದು, ಮೂರು ಪಂದ್ಯ ಸೋತಿದೆ. ಸೆಮಿ ಫೈನಲ್ ಸ್ಥಾನ ಪಡೆಯಲು ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ತಂಡವಿದೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ಮತ್ತು ಫಿಟ್‌ನೆಸ್ ಮಟ್ಟವನ್ನು ಪಾಕಿಸ್ತಾನ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್ ಕಟುವಾಗಿ ಟೀಕಿಸಿದ್ದಾರೆ.
ನೆದರ್ಲೆಂಡ್, ಶ್ರೀಲಂಕಾ ತಂಡಗಳ ವಿರುದ್ಧ ಫೀಲ್ಡಿಂಗ್ ಎಡವಟ್ಟುಗಳ ನಡುವೆಯೂ ಪಾಕಿಸ್ತಾನ ಗೆಲುವು ಸಾಧಿಸಿತ್ತು. ಆದರೆ ನಂತರ ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ಮುಂದೆ ಮಾಡಿರುವ ಕ್ಷೇತ್ರ ರಕ್ಷಣೆಯ ತಪ್ಪು, ಬೌಲಿಂಗ್ ಬದಲಾವಣೆಯ ಕ್ರಮ ಮತ್ತು ಬ್ಯಾಟಿಂಗ್ ವೈಫಲ್ಯಗಳು ತಂಡದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರಿದೆ.
"ಈ ಫಲಿತಾಂಶ ಇಂದು ಮುಜುಗರದ ಸಂಗತಿಯಾಗಿದೆ. ಅಫ್ಘಾನಿಸ್ತಾನ 8 ವಿಕೆಟ್‌ಗಳೊಂದಿಗೆ 280-290 ರನ್‌ಗಳನ್ನು ಬೆನ್ನಟ್ಟಿದರು. ಅಫ್ಘನ್ನರು ಪಿಚ್ ಬಗ್ಗೆ ಚಿಂತಿಸದೇ ಆಡಿದ್ದಾರೆ" ಎಂದು ವಾಸಿಂ ಅಕ್ರಮ್ ಖಾಸಗಿ ಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡು ಹೇಳಿದರು.
"ನಮ್ಮ ತಂಡದ ಆಟಗಾರರ ಫಿಟ್ನೆಸ್ ಮಟ್ಟವನ್ನು ಗಮನಿಸಬೇಕಿದೆ. ಕಳೆದ ಎರಡು ವರ್ಷಗಳಲ್ಲಿ ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಿಲ್ಲ ಎಂದು ನಾವು ಕಳೆದ ಮೂರು ವಾರಗಳಿಂದ ಹೇಳುತ್ತಿದ್ದೇನೆ. ಆಟಗಾರರ ಹೆಸರನ್ನು ನಾನು ಹೇಳಬೇಕೆಂದೇನಿಲ್ಲ, ಮುಖ ನೋಡಿದರೆ ಗೊತ್ತಾಗುತ್ತದೆ ಅವರು ಎಷ್ಟು ಫಿಟ್ನೆಸ್ ಹೊಂದಿದ್ದಾರೆ ಅಂತ. ಲಗ್ತಾ ಹೈ ರೋಜ್ 8 ಕಿಲೋ ನಿಹಾರಿ ಖತೇ ಹೈಂ (ಅವರು ಪ್ರತಿದಿನ 8 ಕಿಲೋ ಮಾಂಸ ತಿನ್ನುತ್ತಾರೆ ಎಂಬಂತೆ ಕಾಣುತ್ತದೆ). ಕೆಲವು ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕು. ದೇಶಕ್ಕಾಗಿ ಆಡಿದ್ದಕ್ಕಾಗಿ ಆಟಗಾರರಿಗೆ ಹಣ ನೀಡಲಾಗುತ್ತಿದೆ. ಹೀಗಾಗಿ ನಿರ್ದಿಷ್ಟ ಮಾನದಂಡಗಳಿರಲೇಬೇಕು" ಎಂದರು.