ನವದೆಹಲಿ: ಚರಿತ್ ಅಸಲಂಕಾ ಶತಕದ ಇನ್ನಿಂಗ್ಸ್ ಮತ್ತು ಪಾತುಮ್ ನಿಸ್ಸಾಂಕ, ಸದೀರ ಸಮರವಿಕ್ರಮ ಅವರ ಆಟದ ನೆರವಿನಿಂದ ಶ್ರೀಲಂಕಾ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ 49.3 ಬಾಲ್ಗೆ ಸರ್ವಪತನ ಕಂಡಿದ್ದು, 279 ರನ್ ಕಲೆಹಾಕಿದೆ. ನಡೆಯುತ್ತಿರುವ ವಿಶ್ವಕಪ್ನಲ್ಲಿ ಒಂದೇ ಗೆಲುವು ಕಂಡು ಈಗಾಗಲೇ ಟೂರ್ನಿಯಿಂದ ಬಾಂಗ್ಲಾದೇಶ ಹೊರಬಿದ್ದಿದೆ. ಆದರೆ 2025ರ ಚಾಂಪಿಯನ್ಸ್ ಟ್ರೋಫಿಗೆ ತಂಡದ ಪ್ರವೇಶಕ್ಕೆ ಗುರಿ ಇಟ್ಟುಕೊಂಡಿರುವ ಶಕೀಬ್ ಅಲ್ ಹಸನ್ ವಿಶ್ವಕಪ್ನಲ್ಲಿ ಬಾಕಿ ಇರುವ ಎರಡು ಪಂದ್ಯಗಳನ್ನು ಗೆಲ್ಲುವ ತವಕದಲ್ಲಿದ್ದಾರೆ.
ಶ್ರೀಲಂಕಾಕ್ಕೆ ವಿಶ್ವಕಪ್ ಅಂಕಪಟ್ಟಿಯಲ್ಲಿ ಅದಕ್ಕಿಂತ ಮೇಲಿರುವ ತಂಡಗಳು ಸತತ ಸೋಲು ಕಂಡಲ್ಲಿ ಸೆಮೀಸ್ ಪ್ರವೇಶಿಸುವ ಅವಕಾಶ ಇದೆ. ಈ ರೀತಿ ಅದೃಷ್ಟ ದೊರೆತಲ್ಲಿ ಅದನ್ನು ಬಳಸಿಕೊಳ್ಳಬೇಕಾದರೆ, ಲಂಕಾ ಇಂದು (ನ.6) ಮತ್ತು ನವೆಂಬರ್ 9 ರಂದು ನಡೆಯಲಿರುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲ್ಲಬೇಕಿದೆ. ಇದೇ ಲೆಕ್ಕಾಚಾರದಲ್ಲಿ ಕುಸಲ್ ಮೆಂಡಿಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಲಂಕಾ 5 ರನ್ ಆಗಿದ್ದಾಗಲೇ ಕುಸಲ್ ಪೆರೇರಾ (4) ಅವರನ್ನು ಕಳೆದುಕೊಂಡಿತು. ಎರಡನೇ ವಿಕೆಟ್ಗೆ 61 ರನ್ಗಳ ಜೊತೆಯಾಟವನ್ನು ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಮಾಡಿದರು. 19 ರನ್ ಗಳಿಸಿದ್ದ ನಾಯಕ ಕುಸಲ್ ಮೆಂಡಿಸ್ ವಿಕೆಟ್ ಕಳೆದುಕೊಂಡರೆ, 41ಕ್ಕೆ ಪಾತುಮ್ ನಿಸ್ಸಾಂಕ ಔಟ್ ಆದರು. ಇಬ್ಬರು 10 ರನ್ಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡಿದ್ದರು. ನಾಲ್ಕನೇ ವಿಕೆಟ್ಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ 63 ರನ್ಗಳ ಪಾಲುದಾರಿಕೆ ಹಂಚಿಕೊಂಡರು. 41 ರನ್ ಗಳಿಸಿದ್ದ ಸದೀರ ಸಮರವಿಕ್ರಮ ವಿಕೆಟ್ ಪತನದಿಂದ ಜೊತೆಯಾಟ್ ಬ್ರೇಕ್ ಆಯಿತು.