ಪುಣೆ (ಮಹಾರಾಷ್ಟ್ರ):27 ವರ್ಷಗಳ ನಂತರ ಮಹಾರಾಷ್ಟ್ರದ ಪುಣೆಯಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯ (ಗುರುವಾರ) ನಡೆಯುತ್ತಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಬಾಂಗ್ಲಾದೇಶ ಠಕ್ಕರ್ ನೀಡಲಿದೆ ಎಂದು ಭಾವಿಸಿರುವ ಬಾಂಗ್ಲಾ ಅಭಿಮಾನಿಗಳ ಜತೆಗೆ ತಂಡದ ವಿಕೆಟ್‌ಕೀಪರ್ ಮುಶ್ಫಿಕರ್ ರೆಹಮಾನ್ ಅವರ ತಂದೆ ಮಹಬೂಬ್ ಹಬೀಬ್ ಕ್ರೀಡಾಂಗಣದಲ್ಲಿ ಹಾಜರಿದ್ದಾರೆ.
ಪಂದ್ಯಾರಂಭಕ್ಕೂ ಮೊದಲು ಮಹಬೂಬ್ ಹಬೀಬ್ ಅವರು ಈಟಿವಿ ಭಾರತ್ ಜತೆಗೆ ಮಾತನಾಡಿದ್ದು, ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಉತ್ತಮವಾಗಿ ಸೆಣಸಾಡಲಿವೆ. ಜಯ ಕೂಡ ದಕ್ಕಬಹುದು. ಆದರೆ, ಭಾರತ ತಂಡ ಅತ್ಯಂತ ಬಲಶಾಲಿಯಾಗಿದ್ದು, ಸೋಲಿಸುವುದು ಕಠಿಣ ಸವಾಲು ಎಂದೂ ಒಪ್ಪಿಕೊಂಡರು.
ಪ್ರಬಲ ಭಾರತದೆದುರು ಬಾಂಗ್ಲಾದೇಶ ಗೆಲ್ಲುವ ನಿರೀಕ್ಷೆ ನನಗಿದೆ. ಜಯ ಗಳಿಸುವುದು ಅಷ್ಟು ಸುಲಭವಲ್ಲ ಎಂದು ಗೊತ್ತಿದೆ. ಆದರೆ ಅಷ್ಟು ಸಲೀಸಾಗಿ ನಮ್ಮ ತಂಡ ಸೋಲದೆಂಬ ನಿರೀಕ್ಷೆಯೂ ಇದೆ. ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದು. ಟೂರ್ನಿಯಲ್ಲಿ ಅತ್ಯುತ್ತಮವಾಗಿ ಆಡುವ ತಂಡ ವಿಶ್ವಕಪ್ ಎತ್ತಿ ಹಿಡಿಯಲಿದೆ ಎಂದರು.