ಕರ್ನಾಟಕ

karnataka

ETV Bharat / sports

ಭಾರತಕ್ಕೆ ವಿಶ್ವಕಪ್​ ಸಿದ್ಧತೆಗೆ ಅಡ್ಡಿ ಪಡಿಸಿದ ವರುಣ.. ಎರಡೂ ಅಭ್ಯಾಸ ಪಂದ್ಯಗಳು ಫಲಿತಾಂಶ ರಹಿತ - ETV Bharath Kannada news

ವಿಶ್ವಕಪ್​ನ ಭಾರತದ ಎರಡು ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಫಲಿತಾಂಶ ರಹಿತವಾಗಿ ಅಂತ್ಯವಾಗಿದೆ.

world cup 2023 warm up match india vs netherlands
world cup 2023 warm up match india vs netherlands

By ETV Bharat Karnataka Team

Published : Oct 3, 2023, 5:48 PM IST

ತಿರುವನಂತಪುರಂ (ಕೇರಳ): ವಿಶ್ವಕಪ್​ಗೂ ಮುನ್ನ ಆಯೋಜಿಸಲಾಗಿದ್ದ ಭಾರತ ಎರಡೂ ಅಭ್ಯಾಸ ಪಂದ್ಯಕ್ಕೆ ಮುಂಗಾರು ಮಳೆ ಕಾಡಿದ್ದು ಫಲಿತಾಂಶ ರಹಿತ ಮ್ಯಾಚ್​ಗಳಾಗಿವೆ. ಮೊದಲ ಅಭ್ಯಾಸ ಪಂದ್ಯವನ್ನು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಅಸ್ಸೋಂನ ಗುವಾಹಟಿ ಮೈದಾನದಲ್ಲಿ ನಡೆಸಲಾಗಿತ್ತು. ಈ ಪಂದ್ಯಕ್ಕೆ ಟಾಸ್​ ನಂತರ ಸುರಿದ ಮಳೆ ಒಂದು ಬಾಲ್​ ಆಡಲು ಬಿಡಲಿಲ್ಲ. ಇಂದು ಕೇರಳದ ತಿರುವನಂತಪುರಂನಲ್ಲಿ ನೆದರ್​ಲ್ಯಾಂಡ್ಸ್​ ವಿರುದ್ಧ ಇದ್ದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದೆ.

ಭಾರತ ಆಸ್ಟ್ರೇಲಿಯಾದ ವಿರುದ್ಧ ಆಡಿದ ಮೂರು ಪಂದ್ಯವೇ ಅಭ್ಯಾಸ ಪಂದ್ಯವಾಗಿದೆ. ಆದರೆ ಅದರಲ್ಲಿ ಸಂಪೂರ್ಣ ವಿಶ್ವಕಪ್​ ತಂಡ ಭಾಗವಹಿಸಿರಲಿಲ್ಲ. ಮೊದಲೆಡು ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ಮತ್ತು ಕುಲ್ದೀಪ್​ ಯಾದವ್​ಗೆ ವಿಶ್ರಾಂತಿ ನೀಡಲಾಗಿತ್ತು. ಮೂರನೇ ಪಂದ್ಯದಲ್ಲಿ ಈ ನಾಲ್ವರು ತಂಡ ಸೇರಿದ್ದರು. ಆದರೆ, ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ವಿಶ್ವಕಪ್​ ತಂಡದ ಆಟಗಾರರಿಗೆ ಮೂರನೇ ಪಂದ್ಯಕ್ಕೆ ರೆಸ್ಟ್​ ಕೊಡಲಾಗಿತ್ತು.

ತಿರುವನಂತರಪುರ ಮೈದಾನದಲ್ಲಿ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಪಂದ್ಯಗಳಿಗು ಮಳೆ ಅಡ್ಡಿ ಉಂಟುಮಾಡಿದೆ. ಸಪ್ಟೆಂಬರ್​ 29 ರಂದು ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ, ಸೆ.30 ಆಸ್ಟ್ರೇಲಿಯಾ vs ನೆದರ್​ಲ್ಯಾಂಡ್ಸ್​ ಮತ್ತು ಅಕ್ಟೋಬರ್​ 3 ರಂದು ಭಾರತ vs ನೆದರ್​ಲ್ಯಾಂಡ್ಸ್​ ಪಂದ್ಯ ಸಂಪೂರ್ಣ ಫಲಿತಾಂಶ ರಹಿತವಾದರೆ, ನಿನ್ನೆ (ಅಕ್ಟೋಬರ್​ 2) ನ್ಯೂಜಿಲೆಂಡ್​ vs ದಕ್ಷಿಣ ಆಫ್ರಿಕಾ ಪಂದ್ಯ ಮಳೆ ಬಂದರೂ ಡಿಎಲ್​ಎಸ್​ ನಿಯಮದನ್ವಯ ಪಂದ್ಯವನ್ನು ನಡೆಸಲಾಯಿತು.

ಇಂದು ಅಭ್ಯಾಸ ಪಂದ್ಯದ ಕೊನೆಯ ದಿನವಾಗಿದೆ. ಅಕ್ಟೋಬರ್​ 5 ರಂದು ವಿಶ್ವಕಪ್​ನ ಉದ್ಘಾನೆ ಆಗಲಿದೆ. ಅಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ ಅಪ್​ ನ್ಯೂಜಿಲೆಂಡ್​ ಸೆಣಸಲಿದೆ. ಈ ಮ್ಯಾಚ್​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೈದಾನ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಆಡಿರುವುದೇ ಭಾರತ ತಂಡಕ್ಕೆ ಬಲವಾಗಿದೆ. ಅಲ್ಲದೇ ಏಷ್ಯಾಕಪ್​ನ್ನು 5 ವರ್ಷಗಳ ನಂತರ ಟೀಮ್​ ಇಂಡಿಯಾ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡು, ವಿಶ್ವಕಪ್​ಗೂ ಮುನ್ನ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ವಿಶ್ವಕಪ್​ ತಂಡದಲ್ಲಿ ಒಂದು ಹುಮ್ಮಸ್ಸಿದ್ದು, ಸತತ ಗೆಲುವು ಕಂಡಿರುವ ಟೀಮ್​ ಇಂಡಿಯಾ ಅಕ್ಟೋಬರ್​ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ವಿಶ್ವಕಪ್​ ಪಂದ್ಯಗಳ ಖಾತೆಯನ್ನು ತೆರೆಯಲಿದೆ.

ವಿಶ್ವಕಪ್​ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್​, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.

ಇದನ್ನೂ ಓದಿ:ಕಮಿನ್ಸ್​ ಪಡೆಗೆ ಒಲಿಯುವುದೇ 6ನೇ ವಿಶ್ವಕಪ್‌? ಭಾರತದಲ್ಲಿ ಆಸ್ಟ್ರೇಲಿಯಾಗೆ ಎದುರಾಗುವ ಸವಾಲುಗಳೇನು?

ABOUT THE AUTHOR

...view details