ಪುಣೆ (ಮಹಾರಾಷ್ಟ್ರ): ಯಾವುದೇ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಗೆಲುವು ಕಷ್ಟವೇನಲ್ಲ. ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ ಇದು ಎರಡು ಬಾರಿ ಸಾಬೀತಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ 69 ರನ್‌ಗಳಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಆಘಾತ ನೀಡಿದರೆ, ನೆದರ್ಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು 38 ರನ್‌ಗಳಿಂದ ಮಣಿಸಿ ಅಚ್ಚರಿಯ ಪ್ರದರ್ಶನ ನೀಡಿತು.
ಈ ಫಲಿತಾಂಶದ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತನಾಡಿ, ವಿಶ್ವಕಪ್ ವೇದಿಕೆಯಲ್ಲಿ ಯಾವುದೂ ದೊಡ್ಡ ತಂಡಗಳಿಲ್ಲ ಎಂದರು. "ವಿಶ್ವಕಪ್‌ನಲ್ಲಿ ಯಾವುದೇ ದೊಡ್ಡ ತಂಡಗಳಿಲ್ಲ. ನೀವು ತಂಡಗಳ ಮೇಲೆ ಗಮನ ಕೇಂದ್ರೀಕರಿಸಿ ಆಡಿದರೆ ಸುಲಭವಾಗಿ ಮಣಿಸಬಹುದು" ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಅಕ್ಟೋಬರ್ 19 ಗುರುವಾರ ಭಾರತ ತನ್ನ ನಾಲ್ಕನೇ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ವಿರಾಟ್ ಹೇಳಿದಂತೆ, 2007ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವೇ ಒಮ್ಮೆ ಭಾರತವನ್ನು ಕಟ್ಟಿಹಾಕಿತ್ತು. ವಿಶ್ವಕಪ್‌ನಲ್ಲಿ ಭಾರತ - ಬಾಂಗ್ಲಾ 4 ಬಾರಿ ಮುಖಾಮುಖಿ ಆಗಿದ್ದು, 3ರಲ್ಲಿ ಭಾರತ ಗೆದ್ದುಕೊಂಡಿದೆ.
ವಿರಾಟ್ ಕೊಹ್ಲಿ ಬಾಂಗ್ಲಾ ಆಲ್ರೌಂಡರ್ ಹಾಗೂ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರ ಕೌಶಲ್ಯ ಪಂದ್ಯದಲ್ಲಿ ಪ್ರಮುಖ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಗಾಯಗೊಂಡಿರುವ ಶಕೀಬ್ ನಾಳಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವುದು ಬಹುತೇಕ ಅನುಮಾನ. ತಂಡದಿಂದಲೂ ಅವರ ಚೇತರಿಕೆಯ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.
"ಇತ್ತೀಚಿನ ವರ್ಷಗಳಲ್ಲಿ ನಾನು ಶಕೀಬ್ ಅಲ್ ಹಸನ್ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಅವರು ಅದ್ಭುತ ನಿಯಂತ್ರಣ ಹೊಂದಿದ್ದಾರೆ. ಅನುಭವಿ ಬೌಲರ್. ಹೊಸ ಬಾಲ್ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಅಲ್ಲದೇ ತಂಡದ ಎಲ್ಲಾ ಬೌಲರ್‌ಗಳ ವಿರುದ್ಧ ಅತ್ಯುತ್ತಮವಾಗಿ ಆಡಬೇಕು. ಈ ಬೌಲರ್‌ಗಳು ಒತ್ತಡವನ್ನು ತರುವಲ್ಲಿ ಮತ್ತು ವಿಕೆಟ್ ಪಡೆಯುವಲ್ಲಿ ಸಾಮರ್ಥ್ಯ ಹೊಂದಿದ್ದಾರೆ" ಎಂದರು.
ಕೊಹ್ಲಿ ವಿಶೇಷ ಬ್ಯಾಟರ್:ಮತ್ತೊಂದೆಡೆ ಶಕೀಬ್ ಅವರು ವಿರಾಟ್ ಕೊಹ್ಲಿಯನ್ನು ಆಧುನಿಕ ಯುಗದ ಅತ್ಯುತ್ತಮ ಬ್ಯಾಟರ್ ಎಂದಿದ್ದಾರೆ. ಅಲ್ಲದೇ ಪ್ರಮುಖ ಪಂದ್ಯಗಳಲ್ಲಿ ಅವರ ವಿಕೆಟ್ ಪಡೆಯಲು ಚಿಂತಿಸುತ್ತಿರುವುದಾಗಿ ಹೇಳಿದರು. "ಕೊಹ್ಲಿ ವಿಶೇಷ ಬ್ಯಾಟರ್, ಬಹುಶಃ ಆಧುನಿಕ ಯುಗದ ಅತ್ಯುತ್ತಮ ಬ್ಯಾಟರ್. ಅವರನ್ನು ಐದು ಬಾರಿ ಔಟ್ ಮಾಡುವುದು ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿಯೂ, ಅವರ ವಿಕೆಟ್ ಪಡೆಯುವುದು ನನಗೆ ತುಂಬಾ ಸಂತೋಷ ನೀಡುತ್ತದೆ" ಎಂದು ಹೇಳಿದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ನಾಳೆ ಪುಣೆಯಲ್ಲಿ ಭಾರತ-ಬಾಂಗ್ಲಾ ಹಣಾಹಣಿ