ಧರ್ಮಶಾಲಾ (ಹಿಮಾಚಲ ಪ್ರದೇಶ): ಹಾರ್ದಿಕ್ ಪಾಂಡ್ಯ ಪಾದದ ಗಾಯಕ್ಕೆ ತುತ್ತಾಗಿದ್ದು ನಾಳಿನ (ಭಾನುವಾರ) ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ನಡುವೆ ತಂಡಕ್ಕೆ ಬ್ಯಾಟಿಂಗ್ ಆಯ್ಕೆಯಾಗಿ ಉಳಿದಿದ್ದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಸಹ ಗಾಯಕ್ಕೆ ತುತ್ತಾಗಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಿ ಆಡುವ ಹನ್ನೊಂದರ ಬಳಗದ ಆಯ್ಕೆ ತಂಡಕ್ಕೆ ತಲೆನೋವಾಗಲಿದೆ.
ಕಿವೀಸ್ ಪಂದ್ಯಕ್ಕೂ ಮೊದಲ ನೆಟ್ ಸೆಷನ್‌ನಲ್ಲಿ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬಲ ಮುಂಗೈ ಬಾಲ್ ಬಡಿದಿದ್ದು ಗಾಯಕ್ಕೆ ತುತ್ತಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಇದ್ದ ಸೂರ್ಯ ಅದನ್ನೂ ಕಳೆದುಕೊಳ್ಳುವಂತಿದ್ದಾರೆ. ಆದರೆ, ಬಲ್ಲ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ಗಂಭೀರ ಗಾಯಕ್ಕೆ ತುತ್ತಾಗದ ಕಾರಣ ನಾಳೆ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.
ಸೂರ್ಯಕುಮಾರ್ ಯಾದವ್ ಅವರು ಥ್ರೋಡೌನ್ ಸ್ಪೆಷಲಿಸ್ಟ್ ಡಿ ರಾಘವೇಂದ್ರ ಅವರನ್ನು ಎದುರಿಸುತ್ತಿದ್ದರು ಮತ್ತು ಬ್ಯಾಟರ್ ಅನ್ನು ನಿರ್ದೇಶಿಸಿದ ರಾಕೆಟ್ ಥ್ರೋ ಅವರ ಮಣಿಕಟ್ಟಿನ ಮೇಲಿನ ಬಲ ಮುಂದೋಳಿನ ಮೇಲೆ ಬಡಿಯಿತು. ಪರಿಣಾಮವಾಗಿ, ಸೂರ್ಯಕುಮಾರ್ ಯಾದವ್ ತಕ್ಷಣ ನೆಟ್ಸ್ ಬಿಟ್ಟು ಫಿಸಿಯೋ ಕಮಲೇಶ್ ಮತ್ತು ತಂಡದ ವೈದ್ಯರೊಂದಿಗೆ ಮರಳಿದರು. ನಂತರ ಅವರಿಗೆ ಐಸ್ ಪ್ಯಾಕ್‌ಗಳೊಂದಿಗೆ ಚಿಕಿತ್ಸೆ ನೀಡಲಾಯಿತು.