ಮುಂಬೈ (ಮಹಾರಾಷ್ಟ್ರ): ಇತ್ತೀಚೆಗೆ ನಿಧನರಾದ ಶ್ರೀಲಂಕಾ ಕ್ರಿಕೆಟ್ ತಂಡದ ಅಪ್ಪಟ ಅಭಿಮಾನಿ ದಿವಂಗತ ಪರ್ಸಿ ಅಬೆಸೆಕೆರಾ ಅವರಿಗೆ ಲಂಕಾ ಆಟಗಾರರು ವಿಶೇಷ ಗೌರವ ಸಲ್ಲಿಸಿದ್ದಾರೆ. ಮುಂಬೈನಲ್ಲಿ ಗುರುವಾರ ಭಾರತ ವಿರುದ್ಧದ ಪಂದ್ಯದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಶ್ರೀಲಂಕಾ ಕ್ರಿಕಟಿಗರು ಮೈದಾನಕ್ಕೆ ಇಳಿದು ಗೌರವ ಸೂಚಿಸಿದ್ದಾರೆ.
ಕ್ರಿಕೆಟ್ನ ಸೂಪರ್ ಫ್ಯಾನ್ ಆಗಿದ್ದ 87 ವರ್ಷದ ಪರ್ಸಿ ಅಬೆಸೆಕೆರಾ ಸೋಮವಾರ ನಿಧನ ಹೊಂದಿದ್ದಾರೆ. ಅಂಕಲ್ ಪರ್ಸಿ ಎಂದೇ ಕರೆಯಲ್ಪಡುತ್ತಿದ್ದ ಅವರು, ಶ್ರೀಲಂಕಾ ತಂಡ ಚಿಯರ್ ಲೀಡರ್ ಆಗಿದ್ದರು. ಪ್ರತಿಯೊಂದು ಪಂದ್ಯದ ಸಂದರ್ಭದಲ್ಲಿ ಹಾಜರಿರುತ್ತಿದ್ದ ಪರ್ಸಿ ಅಬೆಸೆಕೆರಾ ಅವರು, ಸಿಂಹಳೀಯರಿಗೆ ಹುರಿದುಂಬಿಸುತ್ತಿದ್ದರು. ಇದೀಗ ತನ್ನ ಅಪ್ಪಟ ಅಭಿಮಾನಿಯನ್ನು ಕಳೆದುಕೊಂಡಿರುವ ಶ್ರೀಲಂಕಾ ಕ್ರಿಕೆಟ್ ತಂಡವು ಕೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಗೌರವ ಅರ್ಪಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಏಕದಿನ ವಿಶ್ವಕಪ್ ಟೂರ್ನಿಯ 33ನೇ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿಯಬೇಕಾದರೆ ಶ್ರೀಲಂಕಾ ಕ್ರಿಕಟಿಗರು ತಮ್ಮ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್ ತನ್ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
''ಶ್ರೀಲಂಕಾ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಲ್ಲಿದ್ದಾರೆ. ದಿಗ್ಗಜ ಚಿಯರ್ ಲೀಡರ್ ದಿವಂಗತ ಪರ್ಸಿ ಅಬೆಸೆಕೆರಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಟಗಾರರು ಇಂದಿನ ಪಂದ್ಯದಲ್ಲಿ ಭಾರತ ವಿರುದ್ಧ ಕಪ್ಪು ಪಟ್ಟಿಯನ್ನು ಧರಿಸುತ್ತಾರೆ. ಶ್ರೀಲಂಕಾದಲ್ಲಿ ಅಬೆಸೆಕೆರಾ ಕ್ರಿಕೆಟ್ ಆಟದ ಅವಿಭಾಜ್ಯ ಅಂಗವಾಗಿದ್ದರು. ಆಟಗಾರರನ್ನು ಬೆಂಬಲಿಸಲು ಮತ್ತು ಪ್ರೇರೇಪಿಸಲು ಬೌಂಡರಿ ಗೆರೆಯನ್ನು ಮೀರಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರ ಅತ್ಯುನ್ನತ ಪರಂಪರೆಯು ಶ್ರೀಲಂಕಾದ ಟೆಸ್ಟ್ ಯುಗದ ಪೂರ್ವ ಹಾಗೂ ನಂತರದಲ್ಲೂ ವ್ಯಾಪಿಸಿತ್ತು. ಅವರ ಹೆಸರು ಕ್ರಿಕೆಟ್ ಪ್ರೇಮಿಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ'' ಎಂದು ಶ್ರೀಲಂಕಾ ಕ್ರಿಕೆಟ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಸೂಪರ್ ಫ್ಯಾನ್‌ಗಳ ಪರಿಕಲ್ಪನೆಯೇ ಇದಲ್ಲ ಸಮಯದಲ್ಲಿ ಪರ್ಸಿ ಅಬೆಸೆಕೆರಾ ಅವರು ನಿಯಮಿತವಾಗಿ ದ್ವೀಪ ರಾಷ್ಟ್ರದ ಪಂದ್ಯಗಳಿಗೆ ಹಾಜರಾಗುತ್ತಿದ್ದರು. ಸ್ಟ್ಯಾಂಡ್‌ನಲ್ಲಿ ಪ್ರೇಕ್ಷಕರಾಗಿ ಆಟಗಾರರ ಬೆನ್ನನ್ನು ತಟ್ಟುವುದು ಹಾಗೂ ಧ್ವಜವನ್ನು ಬೀಸುವ ಮೂಲಕ ಹುರಿದುಂಬಿಸುತ್ತಿದ್ದರು. 1979ರ ವಿಶ್ವಕಪ್‌ನಲ್ಲೂ ಲಂಕಾ ತಂಡವನ್ನು ಹುರಿದುಂಬಿಸಿದ್ದರು. ಆದರೆ, 1996ರ ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಮುನ್ನೆಲೆಗೆ ಬಂದಿದ್ದರು.
ಅಂಕಲ್ ಪರ್ಸಿ, ಶ್ರೀಲಂಕಾದ ಆಟಗಾರರು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟಿಗರಿಂದಲೂ ಮೆಚ್ಚುಗೆ ಗಳಿಸಿದ್ದರು. ನ್ಯೂಜಿಲೆಂಡ್‌ನ ಮಾಜಿ ನಾಯಕ ಮಾರ್ಟಿನ್ ಕ್ರೋವ್ ಒಮ್ಮೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದ್ದರು. 2015ರಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಅವರು ಪರ್ಸಿ ಅವರನ್ನು ಸಂದರ್ಶಕರ ಡ್ರೆಸ್ಸಿಂಗ್ ಕೋಣೆಗೆ ಆಹ್ವಾನಿಸಿದ್ದರು. ನಾಯಕ ರೋಹಿತ್ ಶರ್ಮಾ ಕೂಡ ಇತ್ತೀಚೆಗೆ ಪರ್ಸಿ ಅವರನ್ನು ಭೇಟಿ ಮಾಡಿದ್ದರು.
ಇದನ್ನೂ ಓದಿ:ಇತಿಹಾಸ ನಿರ್ಮಿಸಿದ ವಂದನಾ ಕಟಾರಿಯಾ; 300 ಹಾಕಿ ಪಂದ್ಯ ಆಡಿದ ಮೊದಲ ಭಾರತೀಯ ಆಟಗಾರ್ತಿ