ಲಖನೌ (ಉತ್ತರ ಪ್ರದೇಶ): 100 ಅಂತಾರಾಷ್ಟ್ರೀಯ ಪಂದ್ಯದ ನಾಯಕತ್ವವನ್ನು ನಿಭಾಯಿಸುತ್ತಿರುವ ರೋಹಿತ್ ಶರ್ಮಾ ಹೊಸ ದಾಖಲೆಯನ್ನು ಬರೆದಿದ್ದಾರೆ. ಲಖನೌನ ಏಕನಾ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ರೋಹಿತ್ 18,000 ಅಂತಾರಾಷ್ಟ್ರೀಯ ರನ್ ಪೂರೈಸಿದ ದಾಖಲೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ ಶುಭಮನ್ ಗಿಲ್ (9), ವಿರಾಟ್ ಕೊಹ್ಲಿ (0) ಮತ್ತು ಶ್ರೇಯಸ್ ಅಯ್ಯರ್ (4) ಬೇಗ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ನಡುವೆಯೂ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಪಂದ್ಯದಲ್ಲಿ 48 ರನ್ ಗಳಿಸುತ್ತಿದ್ದಂತೆ 18,000 ಮೈಲಿಗಲ್ಲು ತಲುಪಿದರು. ಇಷ್ಟು ರನ್ ಕಲೆಹಾಕಿದ ಭಾರತದ ಐದನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ರೋಹಿತ್ ಶರ್ಮಾ ಅವರಿಗಿಂತ ಮೊದಲು ಈ ಗಡಿಯನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (664 ಇನ್ನಿಂಗ್ಸ್, 34,357 ರನ್), ವಿರಾಟ್ ಕೊಹ್ಲಿ* (513 ಇನ್ನಿಂಗ್ಸ್ , 26,121 ರನ್) ರಾಹುಲ್ ದ್ರಾವಿಡ್ (504 ಇನ್ನಿಂಗ್ಸ್, 24,064 ರನ್) ಮತ್ತು ಸೌರವ್ ಗಂಗೂಲಿ (421 ಇನ್ನಿಂಗ್ಸ್, 18,433 ರನ್) ಕಲೆಹಾಕಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ಮಾಜಿ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅವರಂತಹ ವಿಶ್ವ ದರ್ಜೆಯ ಬ್ಯಾಟರ್‌ಗಳ ಹೆಸರನ್ನು ಒಳಗೊಂಡಿರುವ ಐತಿಹಾಸಿಕ ಸಾಧನೆಯನ್ನು ಮಾಡಿದ 19 ಇತರ ಬ್ಯಾಟರ್‌ಗಳ ಪಟ್ಟಿಗೆ ರೋಹಿತ್ ಸೇರ್ಪಡೆ ಆಗಿದ್ದಾರೆ.
ಕಳೆದ ಆವೃತ್ತಿಯ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದರು. ಈ ವರ್ಷವೂ ನಾಯಕರಾಗಿ ತಂಡವನ್ನು ಮುನ್ನಡೆಸುತ್ತ ಅದ್ಭುತ ಇನ್ನಿಂಗ್ಸ್ಗಳನ್ನು ಆಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್ ಶೂನ್ಯಕ್ಕೆ ಔಟ್ ಆದರು. ನಂತರ ಎಲ್ಲಾ ಇನ್ನಿಂಗ್ಸ್ನಲ್ಲಿ ಅಬ್ಬರ ಆಟ ಪ್ರದರ್ಶಿಸಿದ್ದಾರೆ. ಅಫ್ಘಾನ್ ವಿರುದ್ಧ ಶತಕ (131), ಪಾಕಿಸ್ತಾನ ವಿರುದ್ಧ 86, ಬಾಂಗ್ಲಾ 48, ನ್ಯೂಜಿಲೆಂಡ್ 46, ರನ್ ಗಳಿಸಿದ್ದರು.
ಇಂಗ್ಲೆಂಡ್ ವಿರುದ್ಧ ಏಕಾಂಗಿ ಇನ್ನಿಂಗ್ಸ್: ಲಖನೌನಲ್ಲಿ ರೋಹಿತ್ ಶರ್ಮಾ ಏಕಾಂಗಿಯಾಗಿ ತಂಡಕ್ಕೆ ಆಸರೆ ಆದರು. ಗಿಲ್, ಕೊಹ್ಲಿ, ಅಯ್ಯರ್ ವಿಕೆಟ್ ನಂತರ ರಾಹುಲ್ ಜತೆ ಪಾಲುದಾರಿಕೆ ಮಾಡಿದರು. ರಾಹುಲ್ 39ಕ್ಕೆ ಔಟ್ ಆದರೆ, ರೋಹಿತ್ ಶರ್ಮಾ ಈ ವಿಶ್ವಕಪ್ನ ಎರಡನೇ ಶತಕ್ಕೆ 13 ರನ್ ಬಾಕಿ ಇರುವಂತೆ ವಿಕೆಟ್ ಕೊಟ್ಟರು. ಇನ್ನಿಂಗ್ಸ್ನಲ್ಲಿ ರೋಹಿತ್ 101 ಬಾಲ್ ಎದುರಿಸಿ 10 ಬೌಂಡರಿ ಮತ್ತು 3 ಸಿಕ್ಸ್ನಿಂದ 87 ರನ್ ಕಲೆಹಾಕಿದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಬಿಷನ್ ಸಿಂಗ್ ಬೇಡಿ ಸ್ಮರಣಾರ್ಥ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಮ್ ಇಂಡಿಯಾ