ನವದೆಹಲಿ: 'ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಮೂರನೇ ಕ್ರಿಕೆಟಿಗ, ವಿಶ್ವಕಪ್ನಲ್ಲಿ ಅತಿಹೆಚ್ಚು ಶತಕ, ವಿಶ್ವಕಪ್ನಲ್ಲಿ ವೇಗದ 6ನೇ ಶತಕ, ಆರಂಭಿಕನಾಗಿ ಅತಿಹೆಚ್ಚು ಹಂಡ್ರೆಡ್ ಬಾರಿಸಿದ ವಿಶ್ವದ 2ನೇ ಆಟಗಾರ'..! ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಅಫ್ಘನ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಸಿದ ಒಂದು ಶತಕ ಇಷ್ಟೆಲ್ಲಾ ದಾಖಲೆಗಳನ್ನು ಬರೆದಿದೆ.
ಅಫ್ಘನ್ನರ ವಿರುದ್ಧ ವೀರಾವೇಷದ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 63 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಇದು ವಿಶ್ವಕಪ್ನಲ್ಲಿ ರೋಹಿತ್ ದಾಖಲಿಸಿದ 7ನೇ ಶತಕ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (6 ಶತಕ) ಹೆಸರಿನಲ್ಲಿದ್ದ ದಾಖಲೆ ಮುರಿದರು.
ಏಕದಿನದಲ್ಲಿ ಮೂರನೇ ಅತ್ಯಧಿಕ ಶತಕ:ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರಲ್ಲಿ ರೋಹಿತ್ ಮೂರನೇ ಸ್ಥಾನ ಪಡೆದರು. 31 ಹಂಡ್ರೆಡ್ ಸಿಡಿಸಿರುವ ಹಿಟ್ಮ್ಯಾನ್, ಆಸ್ಟ್ರೇಲಿಯಾದ ದಂತಕಥೆ ರಿಕ್ಕಿ ಪಾಂಟಿಂಗ್ ಶತಕಗಳನ್ನು ಮೀರಿದರು. ಪಾಂಟಿಂಗ್ 30 ಶತಕ ಬಾರಿಸಿದ್ದರು. ರೋಹಿತ್ಗೂ ಮುನ್ನ ಸಚಿನ್ ತೆಂಡೂಲ್ಕರ್ 49, ವಿರಾಟ್ ಕೊಹ್ಲಿ 47 ಶತಕ ಬಾರಿಸಿದ್ದಾರೆ.
ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್:ವಿಶ್ವಕಪ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮಾ ಮೂರನೇ ಸ್ಥಾನ ಪಡೆದರು. ಸಚಿನ್ 2,278 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 1115, ರೋಹಿತ್ ಶರ್ಮಾ 1009 ರನ್ ಗಳಿಸಿದರು. ಇದಾದ ಬಳಿಕ ಸೌರವ್ ಗಂಗೂಲಿ 1006, ರಾಹುಲ್ ದ್ರಾವಿಡ್ 860 ರನ್ ಮಾಡಿದ್ದಾರೆ.