ಮುಂಬೈ (ಮಹಾರಾಷ್ಟ್ರ):ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದು, ಜಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿದ್ದಾರೆ.
ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಪ್ರರ್ದಶಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಐದು ಓವರ್ಗಳು ಎಸೆದು ಒಂದು ಮೇಡನ್ ಸಮೇತ ಕೇವಲ 18 ರನ್ ನೀಡಿದ ಐದು ವಿಕೆಟ್ಗಳ ಕಬಳಿಸಿ ಪಾರಮ್ಯ ಮೆರೆದಿದರು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಒಟ್ಟಾರೆ 45 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾದರು.
ಈ ಮೊದಲು ವೇಗಿಗಳಾದ ಜಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ ವಿಶ್ವಕಪ್ ಇತಿಹಾಸದಲ್ಲಿ 44 ವಿಕೆಟ್ ಸಾಧನೆಯೊಂದಿಗೆ ಭಾರತದ ಮೊದಲ ಬೌಲರ್ ಪಟ್ಟಿಯಲ್ಲಿ ಸಮಾನ ಸ್ಥಾನ ಹೊಂದಿದ್ದರು. ಈಗ ಶಮಿ ಇಬ್ಬರನ್ನೂ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ 33 ವಿಕೆಟ್ಗಳ ಪಡೆದ ಸಾಧನೆ ಮಾಡಿದ್ದಾರೆ. ಇತಿಹಾಸದಲ್ಲಿ ಸ್ಪೀನ್ ಮಾಂತ್ರಿಕ ಅನಿಲ್ ಕುಂಬ್ಳೆ 31 ವಿಕೆಟ್ ಪಡೆದಿದ್ದಾರೆ.