ಹೈದರಾಬಾದ್: ನಡೆಯುತ್ತಿರುವ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಸದ್ಯ ಅವರ ಚೇತರಿಕೆ ಸಾಧ್ಯವಿಲ್ಲ ಎಂದಾದ ಮೇಲೆ ಬದಲಿಯಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಆಲ್ರೌಂಡರ್ ಜಾಗದ ಜೊತೆಗೆ ಉಪನಾಯನಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಈಗ ಉಪನಾಯಕ ಪಟ್ಟವನ್ನು ಕೆ ಎಲ್ ರಾಹುಲ್ಗೆ ಕಟ್ಟುವ ಚಿಂತನೆ ನಡೆದಿದೆ.
ಈ ವರ್ಷ ಆರಂಭದಲ್ಲಿ ಕೆ ಎಲ್ ರಾಹುಲ್ ತಮ್ಮ ಕಳಪೆ ಪ್ರದರ್ಶನದಿಂದ ಟೀಕೆ ಗುರಿಯಾಗಿದ್ದರು. ಅವರ ಆಟದ ಬಗ್ಗೆ ಮಾಜಿ ಆಟಗಾರರು ಹಳಿದಿದ್ದರು. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಭಾರತಕ್ಕೆ ಬಂದಿತ್ತು. ಮೊದಲ ಎರಡು ಪಂದ್ಯದಲ್ಲಿ ಉಪನಾಯಕನ ಸ್ಥಾನವನ್ನು ರಾಹುಲ್ಗೆ ನೀಡಲಾಗಿತ್ತು. ಅದರಲ್ಲಿ ರಾಹುಲ್ ಪ್ರದರ್ಶನಕ್ಕೆ ಬಂದ ಟೀಕೆಗಳನ್ನು ಕಂಡ ನಂತರ ಅವರನ್ನು ಉಪನಾಯಕ ಎಂದು ಆಯ್ಕೆ ಸಮಿತಿ ಗುರುತಿಸದೇ 3 ಮತ್ತು 4ನೇ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿತ್ತು. ಅಲ್ಲದೇ ರಾಹುಲ್ 3 ಮತ್ತು 4ನೇ ಟೆಸ್ಟ್ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಉತ್ತಮ ಪ್ರದರ್ಶನ ನೀಡುವ ಮೂಲಕ ಫೆಬ್ರವರಿಯಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಮತ್ತೆ ಸಂಪಾದಿಸಿಕೊಂಡಿದ್ದಾರೆ.
ಐಪಿಎಲ್ ವೇಳೆ ಗಾಯಕ್ಕೆ ತುತ್ತಾದ ಕೆ ಎಲ್ ರಾಹುಲ್ ವಿದೇಶದಲ್ಲಿ ಚಿಕಿತ್ಸೆಗೆ ಒಳಗಾಗಿ ನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಅವರು ಚೇತರಿಸಿಕೊಂಡಿದ್ದರು. ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿದ ಅವರು ಉತ್ತಮ ಕಮ್ಬ್ಯಾಕ್ ಮಾಡಿದರು. ವಿಶ್ವಕಪ್ನಲ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜೊತೆಗೆ ಕೀಪಿಂಗ್ ಸಹ ನಿರ್ವಹಿಸುತ್ತಿದ್ದಾರೆ.