ಚೆನ್ನೈ (ತಮಿಳುನಾಡು): ಕಿವೀಸ್ ತಂಡ ನಿನ್ನೆ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್ನ ಲೀಗ್ ಹಂತದ ಮೂರನೇ ಗೆಲುವನ್ನು ದಾಖಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತಾದರೂ ದೊಡ್ಡ ನಷ್ಟಕ್ಕೆ ಒಳಗಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಗಾಯಕ್ಕೆ ತುತ್ತಾಗಿ ವಿಶ್ವಕಪ್ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ವಿಶ್ವಕಪ್ನ ಮುಂದಿನ ಪಂದ್ಯಗಳಿಗೆ ಟಾಮ್ ಬ್ಲುಂಡೆಲ್ ಅವರಿಗೆ ಕಿವೀಸ್ ಟೀಮ್ ಕರೆಕೊಟ್ಟಿದೆ.
ಅಭ್ಯಾಸ ಪಂದ್ಯ ವೇಳೆ ಗಾಯಕ್ಕೆ ತುತ್ತಾದ ಕೇನ್ ವಿಶ್ವಕಪ್ನ ಮೊದಲೆರಡು ಪಂದ್ಯಗಳಿಗೆ ಮೈದಾನಕ್ಕಿಳಿದಿರಲಿಲ್ಲ. ನಿನ್ನೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯಕ್ಕೆ ವಿಲಿಯಮ್ಸನ್ ಮರಳಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಮತ್ತೆ ಗಾಯಕ್ಕೆ ತುತ್ತಾದರು.
78 ರನ್ ಗಳಿಸಿ ಆಡುತ್ತಿದ್ದ ವೇಳೆ, ನಾಯಕ ಕೇನ್ ವಿಲಿಯಮ್ಸನ್ ಅವರ ಎಡಗೈ ಹೆಬ್ಬೆರಳಿಗೆ ಜೋರಾಗಿ ಬಾಲ್ ತಗುಲಿದ್ದರಿಂದ ಮೂಳೆ ಮುರಿತಕ್ಕೆ ಒಳಗಾಗಿತ್ತು. ನೋವು ತಾಳಲಾರದೆ, ವಿಲಿಯಮ್ಸನ್ ಗಾಯಗೊಂಡು ನಿವೃತ್ತಿ ಪಡೆದಿದ್ದರು. ನ್ಯೂಜಿಲೆಂಡ್ ತಂಡ ಶನಿವಾರ ಎಕ್ಸ್-ರೇ ನಂತರ ಮೂಳೆ ಮುರಿತದ ಬಗ್ಗೆ ಖಚಿತಪಡಿಸಿದೆ.
ನ್ಯೂಜಿಲೆಂಡ್ ತಂಡದ ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ ವಿಲಿಯಮ್ಸನ್ ಗಾಯದ ಬಗ್ಗೆ ಅಪ್ಡೇಟ್ ನೀಡಿದೆ. "ಕೇನ್ ವಿಲಿಯಮ್ಸನ್ ಅವರ ಎಡಗೈ ಹೆಬ್ಬೆರಳಿಗೆ ಮೂಳೆ ಮುರಿತ ಎಕ್ಸ್-ರೇ ಯಿಂದ ದೃಢವಾಗಿದೆ. ಅವರು ಮುಂದಿನ ತಿಂಗಳ ಆಟಗಳಿಗೆ ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಂಡದೊಂದೆಗೆ ಉಳಿಯುತ್ತಾರೆ. ಟಾಮ್ ಬ್ಲುಂಡೆಲ್ ಅವರು ವಿಲಿಯಮ್ಸನ್ ಅವರ ಬದಲಾಗಿ ತಂಡದಲ್ಲಿರುತ್ತಾರೆ" ಎಂದು ತಿಳಿಸಿದೆ.