ಅಹಮದಾಬಾದ್ (ಗುಜರಾತ್):ವಿಶ್ವಕಪ್ನಲ್ಲಿ ಹತ್ತು ಪಂದ್ಯಗಳನ್ನು ಗೆದ್ದುಕೊಂಡು ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲೇ ತಂಡ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ವಿರಾಟ್ ಕೊಹ್ಲಿ (54) ಮತ್ತು ಕೆ ಎಲ್ ರಾಹುಲ್ (66) ಅರ್ಧಶತಕ ಇನ್ನಿಂಗ್ಸ್ ಹಾಗೇ ನಾಯಕ ರೋಹಿತ್ ಶರ್ಮಾ ಅವರ 47 ರನ್ನ ಕೊಡುಗೆಯಿಂದಾಗಿ ನಿಗದಿತ ಓವರ್ ಅಂತ್ಯಕ್ಕೆ ಆಲ್ಔಟ್ ಆದ ತಂಡ 240 ರನ್ ಕಲೆಹಾಕಿದೆ.
2023ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಲೀಗ್ ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಒಮ್ಮೆ ಇಂತಹ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಅದೇ ರೀತಿ ಮತ್ತೊಂದು ಕಳಪೆ ಬ್ಯಾಟಿಂಗ್ ಇನ್ನಿಂಗ್ಸ್ ಆಡಿದರು. 2023ರ ವಿಶ್ವಕಪ್ನಲ್ಲಿ ಭಾರತ ತಂಡ ಮೊದಲ ಬಾರಿಗೆ ಆಲ್ಔಟ್ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು. 130,000 ಜನ ಪ್ರೇಕ್ಷಕರು ಭಾರತದ ಬ್ಯಾಟಿಂಗ್ ಕಂಡು ಒಮ್ಮೆಗೆ ದಂಗಾದರು. 10ಕ್ಕೆ 10 ಪಂದ್ಯವನ್ನು ಹೆಚ್ಚು ಒತ್ತಡಕ್ಕೆ ಒಳಗಾಗದೇ ಗೆದ್ದಿದ್ದ ತಂಡ ತವರು ಮೈದಾನದಲ್ಲಿ ಆಸೀಸ್ ಬೌಲಿಂಗ್ ಮುಂದೆ ಮಂಕಾಯಿತು.
ಆರಂಭಿಕ ಜೊತೆಯಾಟದ ಕೊರತೆ:ರೋಹಿತ್ ಶರ್ಮಾ ಕಳೆದ ಎಲ್ಲಾ ಇನ್ನಿಂಗ್ಸ್ನಲ್ಲಿ ಅಬ್ಬರ ಆಟವನ್ನೇ ಆಡಿದ್ದರು. ಇಂದು ಸಹ ಅದೇ ರೀತಿ ಬ್ಯಾಟ್ ಬೀಸುತ್ತಿದ್ದರು. ಆದರೆ 5ನೇ ಓವರ್ನಲ್ಲಿ 4 ರನ್ ಗಳಿಸಿದ್ದ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿ ಹೊರನಡೆದರು. ಇದರಿಂದ ದೊಡ್ಡ ಆರಂಭವನ್ನು ತಂಡ ಕಳೆದಿಕೊಂಡಿತು.
ವಿರಾಟ್ - ರೋಹಿತ್ ಜೊತೆಯಾಟದ ನಿರೀಕ್ಷೆ:ಅನುಭವಿ ಬ್ಯಾಟರ್ಗಳಿಂದ ದೊಡ್ಡ ಪಾಲುದಾರಿಕೆಯ ಇನ್ನಿಂಗ್ಸ್ ಬರಬಹುದು ಎಂದು ಭಾವಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಬೇಸರ ಮೂಡಿಸಿದರು. 10ನೇ ಓವರ್ನಲ್ಲಿ ಸಿಕ್ಸ್ ಬಾರಿಸುವ ಬರದಲ್ಲಿ ವಿಕೆಟ್ ಕೈಚೆಲ್ಲಿದರು. ರೋಹಿತ್ ಮತ್ತು ವಿರಾಟ್ 46 ರನ್ಗಳ ಜೊತೆಯಾಟವನ್ನು ಆಡಿದ್ದರು. 31 ಬಾಲ್ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸ್ನಿಂದ 47ರನ್ ಗಳಿಸಿ ರೋಹಿತ್ ಔಟ್ ಆದರು.