ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರತದ ಅತ್ಯಂತ ಸುಂದರ ಕ್ರಿಕೆಟ್ ಮೈದಾನ ಎಂದೇ ಕರೆಸಿಕೊಳ್ಳುವ ಧರ್ಮಶಾಲಾ ಕ್ರೀಡಾಂಗಣದ ಔಟ್‌ಫೀಲ್ಡ್ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಬಾಂಗ್ಲಾದೇಶ ವಿರುದ್ಧದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಔಟ್‌ಫೀಲ್ಡ್‌ನಲ್ಲಿ ಡೈವಿಂಗ್ ಮಾಡದಂತೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ತಮ್ಮ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಲ್ಲದೇ, ಔಟ್‌ಫೀಲ್ಡ್ ಅನ್ನು "ಕಳಪೆ" ಎಂದು ಕರೆದಿದ್ದಾರೆ. ವಿಶ್ವಕಪ್ಗೆ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಬೇಕಿತ್ತು ಎಂದೂ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಂಗಳವಾರ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (ಎಚ್‌ಪಿಸಿಎ) ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು.
ನಾಳಿನ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಟ್ಲರ್, "ನನ್ನ ಅಭಿಪ್ರಾಯದ ಪ್ರಕಾರ ಇದು ಕಳಪೆ ಔಟ್‌ಫೀಲ್ಡ್ ಹೊಂದಿದೆ. ಮೈದಾನದಲ್ಲಿ ಡೈವ್ ಮಾಡುವಾಗ ಜಾಗರೂಕರಾಗಿರಬೇಕಾಗುತ್ತದೆ. ರನ್ ಉಳಿಸಲು ನಾವು ಡೈವ್ ಮಾಡಬೇಕು. ಆದರೆ ಮೇಲ್ಮೈ ಮೃದುವಾಗಿರುವುದರಿಂದ ಆಟಗಾರರು ಗಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ವಿಶ್ವಕಪ್ ರೀತಿಯ ಪಂದ್ಯಗಳಿಗೆ ಇದು ಸೂಕ್ತವಾದ ಔಟ್‌ಫೀಲ್ಡ್ ಮೈದಾನ ಅಲ್ಲ. ಹೀಗಾಗಿ ಆಟಗಾರರು ಜಾಗ್ರತೆಯಿಂದ ಕ್ಷೇತ್ರ ರಕ್ಷಣೆ ಮಾಡಬೇಕಿದೆ" ಎಂದರು.
ಅಕ್ಟೋಬರ್ 7 ರಂದು ನಡೆದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆಯೂ ಹೀಗೆಯೇ ಇತ್ತು. ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬೌಂಡರಿ ಬಳಿ ಬಾಲ್ ಹಿಡಿಯಲು ಡೈವ್ ಮಾಡಿದಾಗ ಅವರ ಕಾಲು ಮಣ್ಣಿನಲ್ಲಿ ತಡೆದಂತಾಗಿ ರನ್ ಸೇವ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ರೆಹಮಾನ್‌ಗೆ ಯಾವುದೇ ಗಾಯವಾಗಲಿಲ್ಲ. ಈ ಬಗ್ಗೆ ಅಫ್ಘಾನಿಸ್ತಾನ ಕೋಚ್ ಜೊನಾಥನ್ ಟ್ರಾಟ್ ಅವರು ಅದೃಷ್ಟವಶಾತ್ ಮುಜೀಬ್ ಗಂಭೀರ ಗಾಯದಿಂದ ತಪ್ಪಿಸಿಕೊಂಡರು ಎಂದು ಹೇಳಿದ್ದರು.
"ಆಟಗಾರ ಯಾವುದೇ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಆದರೆ ಇಲ್ಲಿ ಔಟ್‌ಫೀಲ್ಡ್‌ನಲ್ಲಿ ರನ್ ಸೇವ್ ಮಾಡುವಾಗ ಜಾಗರೂಕರಾಗಿರಬೇಕು. ನಾವು ದೇಶಕ್ಕಾಗಿ ಆಡುತ್ತಿದ್ದೇವೆ. ಪ್ರತಿ ರನ್ ಉಳಿಸುವುದು ಮುಖ್ಯ. ಆದರೆ ಮೈದಾನದ ಮೇಲೆ ನಂಬಿಕೆ ಇದ್ದರೆ ಒಂದಂಶ ಹೆಚ್ಚಿನ ಶ್ರಮ ವಹಿಸಬಹುದು. ಇದು ಉಭಯ ತಂಡಗಳಿಗೂ ಆತಂಕಕ್ಕೆ ಕಾರಣವಾಗುವ ವಿಚಾರ. ಹೀಗಾಗಿ ಇಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಿದೆ" ಎಂದರು.
ಹಾಲಿ ಚಾಂಪಿಯನ್ ಇಂಗ್ಲೆಂಡ್ 2023 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು. ಹೀಗಾಗಿ ಇಂಗ್ಲೆಂಡ್ ಗೆದ್ದು ಕಮ್ಬ್ಯಾಕ್ ಮಾಡುವ ಉತ್ಸಾಹದಲ್ಲಿದೆ. ಅತ್ತ ಇಂಗ್ಲೆಂಡ್ ಅನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿ ಗೆದ್ದಿದ್ದ ಬಾಂಗ್ಲಾದೇಶ ನಾಳೆ ಎರಡನೇ ಗೆಲುವು ಎದುರು ನೋಡುತ್ತಿದೆ.
ಇದನ್ನೂ ಓದಿ:Cricket World Cup 2023: ಚೇತರಿಕೆ ಕಾಣದ ಗಿಲ್ ಆರೋಗ್ಯ.. ಪಾಕಿಸ್ತಾನ ಪಂದ್ಯಕ್ಕೆ ಮರಳುತ್ತಾರಾ ಶುಭಮನ್?