ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಾರದ ಹಕ್ಕು ಕಳೆದುಕೊಂಡಿದ್ದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ವಿಶ್ವಕಪ್ ಒಂದು ರೀತಿ ಆಸರೆಯಾಗಿದೆ. ಜಿಯೋ ಸಿನಿಮಾ ನೀಡಿದ ಉಚಿತ ಯೋಜನೆಯನ್ನು ವಿಶ್ವಕಪ್ಗೆ ಅಳವಡಿಸಿಕೊಂಡ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮತ್ತೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅದರಲ್ಲೂ ವಿಶ್ವಕಪ್ನ ಹೈವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಹಾಟ್‌ಸ್ಟಾರ್ ಜಿಯೋ ಸಿನಿಮಾದ ಐಪಿಎಲ್ ದಾಖಲೆ ಪುಡಿ ಮಾಡಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಸಿಸಿ ವಿಶ್ವಕಪ್ 2023ರಲ್ಲಿ ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಮತ್ತು ನಾಯಕ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್ ಆಡಿದರೆ, ಬೌಲರ್‌ಗಳು ಚೆಂಡಿನೊಂದಿಗೆ ಆಕರ್ಷಕ ಪ್ರದರ್ಶನ ನೀಡಿದರು. ಈ ಪಂದ್ಯದ ಮೂಲಕ, ವಿಶ್ವಕಪ್ 2023 ಅನ್ನು ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವ ‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ಗೆ ಬಂಪರ್ ಲಾಟರಿ ಹೊಡೆದಂತಾಗಿದೆ.
3.3 ಕೋಟಿ ವೀಕ್ಷಕರನ್ನು ಪಡೆದ ಹಾಟ್‌ಸ್ಟಾರ್: ಒಟಿಟಿ ಪ್ಲಾಟ್‌ಫಾರ್ಮ್ 'ಡಿಸ್ನಿ ಪ್ಲಸ್ ಹಾಟ್‌ಸ್ಟಾರ್'ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಹೆಚ್ಚು ಕಡಿಮೆ 3.5 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೀಡಿದೆ. ಈ ಆ್ಯಪ್ 3.5 ಕೋಟಿ ವೀಕ್ಷಕರನ್ನು ಪಡೆದಿರುವುದು ಇದೇ ಮೊದಲು. ಭಾರತ-ಪಾಕ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ವೀಕ್ಷಕರ ಸಂಖ್ಯೆ 3.3 ಕೋಟಿ ತಲುಪಿತ್ತು.