ರಾಜ್ಕೋಟ್:ರಾಮಾಯಣದಲ್ಲಿ ಆಂಜನೇಯ ಲಂಕೆಗೆ ಬೆಂಕಿ ಇಟ್ಟರೆ, ರಾಜ್ಕೋಟ್ನಲ್ಲಿ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ಕ್ರಿಕೆಟ್ ತಂಡದ ಕನಸಿಗೆ ಬೆಂಕಿ ಇಟ್ಟರು. ಪ್ರಥಮ ಸರಣಿ ಗೆಲುವಿನ ಉತ್ಸಾಹದಲ್ಲಿದ್ದ ತಂಡವನ್ನು ಏಕಮೇವವಾಗಿ ಧೂಳೀಪಟ ಮಾಡಿದ ಸೂರ್ಯ, ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಭಾರತೀಯನ ಬಿರುಗಾಳಿ ಆಟಕ್ಕೆ ವಿಶ್ವಕ್ರಿಕೆಟ್ ಬಹುಪರಾಕ್ ಹೇಳಿದೆ.
ಸರಣಿ ಗೆಲುವಿನ ನಿರ್ಣಾಯಕ ಪಂದ್ಯದಲ್ಲಿ ಕೆಚ್ಚೆದೆಯ ಆಟವಾಡಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 112 ರನ್ ಬಾರಿಸಿ ಶತಕ ಸಂಭ್ರಮಾಚರಣೆ ಮಾಡಿದರು. ಇದು ಟಿ20 ಕ್ರಿಕೆಟ್ನಲ್ಲಿ ಸೂರ್ಯನ ಮೂರನೇ ಶತಕವಾಗಿದೆ. ಭರ್ಜರಿ ಶತಕದ ಬಲದಿಂದ ಭಾರತ ಪಂದ್ಯದಲ್ಲಿ 228 ರನ್ಗಳ ಬೃಹತ್ ಮೊತ್ತ ಪೇರಿಸಿತು. ಶ್ರೀಲಂಕಾ 137 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಗಂಟುಮೂಟೆ ಕಟ್ಟಿ 91 ರನ್ಗಳ ಸೋಲು ಕಂಡಿತು.
ಸೂರ್ಯನ ಸಿಡಿಲಬ್ಬರದ ಶತಕ:ದ್ವಿಶತಕ ವೀರ ಇಶಾನ್ ಕಿಶನ್ ಬೇಗನೇ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಾಹುಲ್ ತ್ರಿಪಾಠಿ 16 ಎಸೆತಗಳಲ್ಲಿ ಬಿರುಸಿನ ಬ್ಯಾಟ್ ಮಾಡಿ 35 ರನ್ ಮಾಡಿದರು. ದೊಡ್ಡ ಹೊಡೆತಕ್ಕೆ ಕೈಹಾಕಿದ ತ್ರಿಪಾಠಿ ಅವರು ಕರುಣಾರತ್ನೆ ಬೌಲಿಂಗ್ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ರಾಜ್ಕೋಟ್ನಲ್ಲಿ ರಾಜನಾಗಿ ಮೆರೆದ ಸೂರ್ಯ ಮೈದಾನದ ಪ್ರತಿ ಮೂಲೆಯಲ್ಲೂ ಚೆಂಡನ್ನು ನುಗ್ಗಿಸಿದರು.
ಶ್ರೀಲಂಕಾದ ಬೌಲರ್ಗಳನ್ನು ಮನಸೋಇಚ್ಚೆ ಬೆಂಡೆತ್ತಿದರು. 26 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಸೂರ್ಯಕುಮಾರ್, ಬಳಿಕ ಬ್ಯಾಟ್ ಅನ್ನು ಇನ್ನಷ್ಟು ಚಾರ್ಜ್ ಮಾಡಿ ಮುಂದಿನ 19 ಎಸೆತಗಳಲ್ಲಿ 50 ರನ್ ಬಾರಿಸಿ ಶತಕದ ಸಂಭ್ರಮಾಚರಣೆ ಮಾಡಿದರು. ಇದು ಭಾರತೀಯರ ಬಿರುಬೀಸಾದ ಬ್ಯಾಟಿಂಗ್ಗೆ ಸಾಕ್ಷಿಯಾಗಿತ್ತು. ಕೊನೆಯವರೆಗೂ ಅಜೇಯರಾಗಿ ಉಳಿದ ಆಟಗಾರ ಹಲವು ಮನಮೋಹಕ ಸಿಕ್ಸರ್ಗಳನ್ನು ಸಿಡಿಸಿದರು.