ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಭಾರತೀಯ ಬ್ಯಾಟ್ಸ್ಮನ್ಗಳನ್ನು ಪದೇ ಪದೇ ಸ್ಲೆಡ್ಜಿಂಗ್ ಮಾಡಿದರೂ, ಅದನ್ನು ಲೆಕ್ಕಿಸದೇ ಬ್ಯಾಟ್ ಮೂಲಕವೇ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ತಕ್ಕ ಉತ್ತರ ನೀಡಿದ್ದಾರೆ.
ಭಾನುವಾರ ವಿರಾಟ್ ಕೊಹ್ಲಿಯೊಂದಿಗೆ ವಾಕ್ಸಮರ ನಡೆಸಿದ್ದ ಆಂಗ್ಲರು ಇಂದು ಜಸ್ಪ್ರೀತ್ ಬುಮ್ರಾ ಅವರೊಡನೆ ಪದೇ ಪದೇ ಸ್ಲೆಡ್ಜಿಂಗ್ ಮೂಲಕ ಏಕಾಗ್ರತೆ ಹಾಳು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಬುಮ್ರಾ ಮಾತಿನ ಮೂಲಕ ಉತ್ತರ ಕೊಟ್ಟರೆ, ಶಮಿ ಸೈಲೆಂಟಾಗಿ ತಮ್ಮ ಬ್ಯಾಟಿಂಗ್ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.
ಬುಮ್ರಾ ಬ್ಯಾಟಿಂಗ್ಗೆ ಬರುತ್ತಿದ್ದಂತೆಯೇ 91 ಓವರ್ನಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ಮೊದಲು ಕಾಲು ಕೆರೆದು ಜಗಳಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಬುಮ್ರಾ ಅಂಪೈರ್ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕೂಡ ಬುಮ್ರಾ ಜೊತೆ ವಾಗ್ವಾದ ನಡೆಸಿದರು.