ಮೌಂಟ್ ಮೌಂಗನುಯಿ :ಭಾರತ ತಂಡದ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ 250 ವಿಕೆಟ್ ಪಡೆದು ತಮ್ಮದೇ ವಿಶ್ವದಾಖಲೆಯನ್ನು ಮತ್ತಷ್ಟು ವಿಸ್ತರಿಸಿಕೊಂಡರು.
ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಏಕೈಕ ಮಹಿಳಾ ಬೌಲರ್ ಆಗಿರುವ ಜೂಲನ್, ಇದೀಗ 250ರ ಗಡಿರೇಖೆ ದಾಟಿ ಸಾಗುತ್ತಿದ್ದಾರೆ. ವಿಶೇಷವೆಂದರೆ, ಇವರು ಪ್ರಸ್ತುತ ವಿಶ್ವಕಪ್ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದು, ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಿಂಡೀಸ್ ಬೌಲರ್ ಅನಿಶಾ ಮೊಹಮ್ಮದ್(18) ಅವರಿಗಿಂತ 70 ವಿಕೆಟ್ ಮುಂದಿದ್ದಾರೆ.
ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಟಮ್ಮಿ ಬ್ಯೂಮಾಂಟ್ ಅವರ ವಿಕೆಟ್ ಪಡೆಯುವುದರೊಂದಿಗೆ ಜೂಲನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 350 ವಿಕೆಟ್ ಮೈಲುಗಲ್ಲು ಸಹ ತಲುಪಿದರು. ತಮ್ಮ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಗೋಸ್ವಾಮಿ, ನಾನು ಮೈದಾನದಲ್ಲಿ ತಂಡಕ್ಕಾಗಿ ಆಡಲು ಬಯಸುತ್ತೇನೆಯೇ ಹೊರತು ವೈಯಕ್ತಿಕ ಸಾಧನೆ ಬಗ್ಗೆ ಆಲೋಚಿಸುವುದಿಲ್ಲ ಎಂದರು.