ಹ್ಯಾಮಿಲ್ಟನ್:ದಕ್ಷಿಣ ಆಫ್ರಿಕಾ ಮಹಿಳಾ ತಂಡ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಗುರುವಾರ ಅತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ 2 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಉತ್ತಮ ಆರಂಭದ ಹೊರತಾಗಿಯೂ, ದಿಢೀರ್ ಕುಸಿತ ಅನುಭವಿಸಿ ಕೇವಲ 228ಕ್ಕೆ ಆಲೌಟ್ ಆಯಿತು.
ಆರಂಭದಲ್ಲೇ ಸೂಜಿ ಬೇಟ್ಸ್ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ಗೆ ನಾಯಕಿ ಸೋಫಿ ಡಿವೈನ್ 93(101 ಎಸೆತ) ಮತ್ತು ಅಮೇಲಿಯಾ ಕೆರ್ 42(58 ಎಸೆತ) ರನ್ಗಳಿಸಿ ತಂಡವನ್ನು ಸುಸ್ಥಿತಿಗೆ ತಂದಿದ್ದರು. ಇವರ ನಂತರ ಬಂದ ಬ್ಯಾಟರ್ಗಳು ದಕ್ಷಿಣ ಆಫ್ರಿಕಾ ದಾಳಿಗೆ ಉತ್ತರಿಸಲಾಗದೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮ್ಯಾಡಿ ಗ್ರೀನ್ 30 ಮತ್ತು ಹ್ಯಾಲಿಡೇ 24 ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಇನ್ನು 229ರನ್ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 49.3 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿ ಸೆಮಿಫೈನಲ್ಗೆ ಮತ್ತಷ್ಟು ಹತ್ತಿರವಾಗಿದೆ.