ಕೇಪ್ಟೌನ್:ಶುಕ್ರವಾರದಿಂದ ಆರಂಭವಾಗಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಶ್ರೀಲಂಕಾ ವನಿತೆಯರು 3 ರನ್ಗಳಿಂದ ಸೋಲಿಸಿ ಶುಭಾರಂಭ ಮಾಡಿದರು. ಮೊದಲು ಬ್ಯಾಟ್ ಮಾಡಿದ ಲಂಕಾ ವನಿತೆಯರು ನಾಯಕಿ ಚಾಮರಿ ಅಟುಪಟ್ಟು ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್ಗೆ 129 ರನ್ ಗಳಿಸಿದ್ದರು. ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮಹಿಳೆಯರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಗೆಲುವಿನ ಹಂತದಲ್ಲಿ ಸೋಲು ಕಂಡರು.
ಆತಿಥೇಯ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಲಂಕಾ ಆರಂಭಿಕ ಆಟಗಾರ್ತಿ ಮದಾವಿ 8 ರನ್ಗೆ ಔಟ್ ಆದರು. ಟಿ20ಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಲಂಕಾ ನಾಯಕಿ ಚಾಮರಿ ಅಟುಪಟ್ಟು ಇನಿಂಗ್ಸ್ ಮುನ್ನಡೆಸಿದರು. 50 ಎಸೆತಗಳಲ್ಲಿ 12 ಬೌಂಡರಿ ಸಮೇತ 68 ರನ್ ಗಳಿಸಿದರು. ನಾಯಕಿಗೆ ವಿಸ್ಮಿ ಗುಣರತ್ನೆ ಉತ್ತಮ ಸಾಥ್ ನೀಡಿದರು. ಇಬ್ಬರೂ ಸೇರಿ 86 ರನ್ ಸೇರಿಸಿದರು.
ಶ್ರೀಲಂಕಾದ ನಾಯಕಿ ಕೆಲವು ಗಟ್ಟಿ ಹೊಡೆತಗಳ ಮೂಲಕ ಗಮನ ಸೆಳೆದರು. ಮೊದಲ ವಿಕೆಟ್ ಬಿದ್ದ ಬಳಿಕ ಒತ್ತಡ ಹೇರಿದ ಆಫ್ರಿಕನ್ನರ ಮೇಲೆ ನಿಧಾನವಾಗಿ ಸವಾರಿ ಮಾಡಿದರು. ಒಂದರ ಹಿಂದೆ ಒಂದು ಬೌಂಡರಿ ಬಾರಿಸಿ ರನ್ ಗಳಿಸಿದರು. ಇನ್ನೊಂದೆಡೆ ವಿಸ್ಮಿ ಗುಣರತ್ನೆ ಉತ್ತಮ ಬ್ಯಾಟ್ ಬೀಸಿ 34 ಎಸೆತಗಳಲ್ಲಿ 35 ರನ್ ಮಾಡಿದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದರಿಂದ ತಂಡ 20 ಓವರ್‌ಗಳಲ್ಲಿ 4 ವಿಕೆಟ್ಗೆ 129 ರನ್ ಗಳಿಸಿತು. ಹರಿಣಗಳ ಪರವಾಗಿ ಎಸ್.ಇಸ್ಮಾಯಿಲ್, ಮಾರಿಝನ್ನೆ ಕಪ್, ನದಿನೆ ಡಿ ಕ್ಲರ್ಕ್ ತಲಾ 1 ವಿಕೆಟ್ ಪಡೆದರು.
ಬ್ಯಾಟಿಂಗ್ ವೈಫಲ್ಯ:130 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ವನಿತೆಯರು ನಿಧಾನಗತಿ ಬ್ಯಾಟಿಂಗ್ ಜೊತೆಗೆ ದೊಡ್ಡ ಮೊತ್ತ ಪೇರಿಸಲಿಲ್ಲ. ಲೌರಾ ವೋಲ್ವಾರ್ಟ್ 18, ತಜ್ಮಿನ್ ಬ್ರಿಟ್ಸ್ 12, ಮಾರಿಝನ್ನೆ ಕಪ್ 11, ನಾಯಕಿ ಸುನೆ ಲೂಸ್ 28, ಚೋಲೆ ಟ್ರಯಾನ್ 10, ಅನ್ನೆಕ್ಕೆ ಬೋಚ್ 0, ವಿಕೆಟ್ ಕೀಪರ್ ಸಿನಾಲೋ ಜಾಫ್ತಾ 15 ಗಳಿಸಿ ಔಟಾದರು. ನಿಧಾನವಾಗಿ ಬ್ಯಾಟ್ ಬೀಸಿದ ಕಾರಣ ಡೆತ್ ಓವರ್‌ಗಳಲ್ಲಿ ರನ್ರೇಟ್ ಹೆಚ್ಚಾಯಿತು. ಇದರಿಂದ ತಂಡ ಒತ್ತಡಕ್ಕೆ ಸಿಲುಕಿ ಸೋಲೊಪ್ಪಿಕೊಂಡಿತು.