ಮುಂಬೈ:ನಿನ್ನೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಪಂದ್ಯಗಳಿಗೆ ಬಿಡುವು ನೀಡಲಾಗಿತ್ತು. ವಾರಾಂತ್ಯಕ್ಕೆ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಕಾದಿದೆ. ಇಂದು ಮತ್ತು ನಾಳೆ ಡಬಲ್ ಹೆಡರ್ ಪಂದ್ಯಗಳಿದ್ದು, ಇಂದಿನ ಮೊದಲ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ಆಡಿದರೆ, ಸಂಜೆಯ ಪಂದ್ಯದಲ್ಲಿ ಗುಜರಾತ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಲಿವೆ.
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಯುಪಿ ವಾರಿಯರ್ಸ್ ತಂಡ ಕಳೆದೆರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರಿಂದ ಪ್ಲೇ-ಆಫ್ ತಲುಪಲು ಅವರ ಹಾದಿ ಕಷ್ಟಕರವಾಗಿದೆ. ಮೇ 24ರಂದು ನಡೆಯಲಿರುವ ಎಲಿಮಿನೇಟರ್‌ನಲ್ಲಿ ಆಡಬೇಕಾದರೆ ಇಂದಿನ ಪಂದ್ಯ ಸೇರಿದಂತೆ ಉಳಿದ ಎರಡು ಪಂದ್ಯಗಳನ್ನು ಯುಪಿ ಗೆಲ್ಲಲೇಬೇಕಿದೆ.
ಸೋಲನ್ನೇ ಕಾಣದೆ ಸತತ ಐದು ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ ಪ್ಲೇ-ಆಫ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಇಂಡಿಯನ್ಸ್ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರ ಸ್ಥಾನದಲ್ಲಿ ಮುಂಬೈ ಮುಂದುವರೆದರೆ ನೇರ ಫೈನಲ್ಗೆ ಪ್ರವೇಶ ಪಡೆಯಲಿದೆ.
ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ನೇತೃತ್ವದ ಕ್ಯಾಪಿಟಲ್ಸ್ ಆರರಲ್ಲಿ ಮೂರರಲ್ಲಿ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಡೆಲ್ಲಿ ಸೋಲು ಕಂಡಿದೆ. ವಾರಿಯರ್ಸ್ ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ಆರು ಪಂದ್ಯಗಳಲ್ಲಿ ಎರಡನ್ನು ಗೆದ್ದು, ಮೂರರಲ್ಲಿ ಸೋಲು ಕಂಡಿದೆ. ಗುಜರಾತ್ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರು ಪಂದ್ಯಗಳಲ್ಲಿ ಒಂದನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಅಲಿಸ್ಸಾ ಹೀಲಿ ನೇತೃತ್ವದ ಯುಪಿ ಇಂದಿನ ಪಂದ್ಯದಲ್ಲಿ ಸೋತರೆ, ಅದು ಹ್ಯಾಟ್ರಿಕ್ ಸೋಲಿನಂತಾಗುತ್ತದೆ. ತಂಡದಲ್ಲಿ ದೇವಿಕಾ ವೈದ್ಯ, ಕಿರಣ್ ನವಗಿರೆ ಅವರಂತಹ ಬಲಿಷ್ಠ ಬ್ಯಾಟರ್ ಗಳಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡರ್‌ಗಳಾದ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ಕೂಡ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ದೀಪ್ತಿ ಶರ್ಮಾ ಮತ್ತು ಸೋಫಿ ಎಕ್ಲೆಸ್ಟೋನ್ ಇಲ್ಲಿಯವರೆಗೆ ಉತ್ತಮ ಬೌಲಿಂಗ್ ಮಾಡಿದ್ದಾರೆ. ಮತ್ತೊಂದೆಡೆ, ಸಯ್ಕಾ ಇಶಾಕ್ 5.66ರ ಎಕಾನಮಿಯಲ್ಲಿ ಮುಂಬೈ ಪರವಾಗಿ ಐದು ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಇದುವರೆಗೆ ಡಬ್ಲ್ಯುಪಿಎಲ್‌ನಲ್ಲಿ ಮೂರು ಅರ್ಧಶತಕ ಗಳಿಸಿ ಅದ್ಭುತ ಫಾರ್ಮ್ನಲ್ಲಿದ್ದಾರೆ.