ಕರ್ನಾಟಕ

karnataka

ETV Bharat / sports

ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಹರ್ಮನ್‌ಪ್ರೀತ್ ಕೌರ್ ನಾಯಕಿ

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವೂ ನಾಯಕಿಯನ್ನಾಗಿ ನೇಮಿಸಿದೆ.

Harmanpreet Kaur
ಹರ್ಮನ್‌ಪ್ರೀತ್ ಕೌರ್

By

Published : Mar 2, 2023, 8:15 AM IST

ಮುಂಬೈ (ಮಹಾರಾಷ್ಟ್ರ): ಇದೇ ಶನಿವಾರದಿಂದ ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ (ಡಬ್ಲ್ಯೂಪಿಎಲ್)ಗೆ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಭಾರತದ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ತಂಡದ ನಾಯಕಿಯಾಗಿ ಬುಧವಾರ ಅಧಿಕೃತವಾಗಿ ಘೋಷಿಸಲಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2023ರಲ್ಲಿ 150 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರೈಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದ ಹರ್ಮನ್‌ಪ್ರೀತ್ ಅವರನ್ನು ಕಳೆದ ತಿಂಗಳು ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 1.8 ಕೋಟಿ ರೂ.ಗೆ ಖರೀದಿಸಿತ್ತು.

"ಕಳೆದೊಂದು ದಶಕದಿಂದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ವನಿತೆಯರ ಕ್ರಿಕೆಟ್‌ ತಂಡಕ್ಕೆ ಕೌರ್‌ ಆಧಾರ ಸ್ತಂಭವೆನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಕೌರ್‌ಗೆ ತಂಡವನ್ನು ಮುನ್ನಡೆಸಿದ ಸುದೀರ್ಘ ಅನುಭವವಿದೆ. ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮೊಟ್ಟಮೊದಲ ನಾಯಕಿಯಾಗಿ ಹರ್ಮನ್​​ಪ್ರೀತ್ ಕೌರ್ ಅವರ ಹೆಸರು ಘೋಷಿಸಲು ತುಂಬಾ ಸಂತಸವಾಗುತ್ತಿದೆ. ರಾಷ್ಟ್ರೀಯ ತಂಡದ ನಾಯಕಿಯಾಗಿ ಅವರು ಭಾರತೀಯ ಮಹಿಳಾ ತಂಡಕ್ಕೆ ಕೆಲವು ಅವಿಸ್ಮರಣೀಯ ಗೆಲುವು ತಂದು ಕೊಟ್ಟಿದ್ದಾರೆ. ತರಬೇತುದಾರ ಚಾರ್ಲೋಟ್ ಮತ್ತು ಜೂಲನ್ ಅವರು ಮುಂಬೈ ಇಂಡಿಯನ್ಸ್‌ ಉನ್ನತ ದರ್ಜೆಯ ಕ್ರಿಕೆಟ್ ಆಡಲು ಸ್ಫೂರ್ತಿ ತುಂಬುವ ವಿಶ್ವಾಸವಿದೆ. ತಂಡದ ಹೊಸ ಅಧ್ಯಾಯದ ಆರಂಭವನ್ನು ನಾವು ಎದುರು ನೋಡುತ್ತಿದ್ದೇವೆ. ಉತ್ಸಾಹಿ ಪಯಣಕ್ಕೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ" ಎಂದು ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ ಶುಭ ಹಾರೈಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ಈ ಹಿಂದೆಯೇ ನೇಮಕಗೊಂಡಿದ್ದರು. ಭಾರತದ ದಿಗ್ಗಜ ವೇಗದ ಬೌಲರ್ ಜೂಲನ್ ಗೋಸ್ವಾಮಿ ತಂಡದ ಮೆಂಟರ್ ಹಾಗೂ ಬೌಲಿಂಗ್ ಕೋಚ್ ಆಗಿದ್ದಾರೆ. ಮಾಜಿ ಆಟಗಾರ್ತಿ ದೇವೀಕಾ ಪಾಲ್ಶಿಕರ್ ಬ್ಯಾಟಿಂಗ್ ಕೋಚ್ ಆಗಿದ್ದರೆ, ಇಂಗ್ಲೆಂಡ್‌ನ ಲಿಡಿಯಾ ಗ್ರೀನ್ ವೇ ಫೀಲ್ಡಿಂಗ್ ಕೋಚ್ ಆಗಿದ್ದಾರೆ.

ಕೌರ್ ಸಾರಥ್ಯದ ಮುಂಬೈ ತಂಡದಲ್ಲಿ ಹಲವು ಪ್ರತಿಭಾವಂತ ಆಟಗಾರ್ತಿಯರಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ನಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಅಮನ್ಜೋತ್ ಕೌರ್, ಧಾರಾ ಗುಜ್ಜರ್, ಶೇಕಾ ಇಶಾಕ್, ಹ್ಯಾಲಿ ಮ್ಯಾಥ್ಯೂಸ್, ಕ್ಲೋಯಿ ಟ್ರೈಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲ, ಸೋನಂ ಯಾದವ್, ನೀಲಮ್ ಬಿಸ್ಟ್, ಜಿಂಟಿಮನಿ ಕಲಿಟಾ, ಪೂಜಾ ವಸ್ತ್ರಾಕರ್, ಯಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಬೆಲ್ ವೊಂಗ್ ತಂಡದ ಪ್ರಮುಖ ಆಟಗಾರ್ತಿಯರು.

ಮುಂಬೈ ಇಂಡಿಯನ್ಸ್ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮಾ. 4ರಂದು ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ವಿದೇಶಿ ಟಿ20 ಲೀಗ್​ಗಳಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟರ್​ ಎನಿಸಿರುವ ಹರ್ಮನ್‌​ಪ್ರೀತ್​, ಭಾರತೀಯ ಕ್ರಿಕೆಟ್​ನ ಶ್ರೇಷ್ಠತೆಯನ್ನು ವಿಶ್ವಕ್ಕೆ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಜಾಗತಿಕ ಮಹಿಳಾ ಕ್ರಿಕೆಟ್​ನ ಕೆಲ ಅತ್ಯುತ್ತಮ ತಾರೆಯರು ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಈಗ ಹರ್ಮನ್‌ ಪ್ರೀತ್‌ ​ಮುನ್ನಡೆಸಲಿದ್ದಾರೆ.

ಇದನ್ನೂ ಓದಿ:ವನಿತೆಯರ ಕ್ರಿಕೆಟ್​ ಶ್ರೇಯಾಂಕ: ನಾಯಕಿ ಹರ್ಮನ್​ಪ್ರೀತ್​ ಕೌರ್​ ಟಾಪ್​ 5 ಬ್ಯಾಟರ್​

ABOUT THE AUTHOR

...view details