ಕರ್ನಾಟಕ

karnataka

ETV Bharat / sports

ಮಹಿಳಾ ಏಕದಿನ ಕ್ರಿಕೆಟ್‌: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್​ಗಳ ಜಯ - ಮಹಿಳಾ ಏಕದಿನ ಪಂದ್ಯ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಕ್ರಿಕೆಟ್ ಪಂದ್ಯದದಲ್ಲಿ ಆಸೀಸ್​ ಗೆಲುವು ಸಾಧಿಸಿತು.

ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್​ಗಳ ಜಯ
ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 6 ವಿಕೆಟ್​ಗಳ ಜಯ

By ETV Bharat Karnataka Team

Published : Dec 28, 2023, 5:43 PM IST

Updated : Dec 28, 2023, 9:32 PM IST

ಮುಂಬೈ:ಭಾರತ-ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್​ 6 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 283 ರನ್​ಗಳ ಗುರಿ ನೀಡಿತ್ತು. ಇದಕ್ಕುತ್ತರವಾಗಿ ಆಸೀಸ್​ 46.3 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 285 ರನ್ ಬಾರಿಸುವ ಮೂಲಕ ಗೆಲುವು ದಾಖಲಿಸಿತು.

ಆಸ್ಟ್ರೇಲಿಯಾ ಪರ ಫೋಬೆ ಲಿಚ್ಫೀಲ್ಡ್ (78), ಎಲ್ಲಿಸ್ ಪೆರ್ರಿ(75), ಮೆಕ್‌ಗ್ರಾತ್(ಅಜೇಯ 68) ಅರ್ಧಶತಕ ಸಿಡಿಸಿದರೆ ಮೂನಿ 42 ರನ್​ಗಳ ಕೊಡುಗೆ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಪರ ರೇಣುಕಾ ಸಿಂಗ್​, ವಸ್ತ್ರಾಕರ್, ಸ್ನೇಹ ರಾಣಾ, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ, ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಭಾರತ ಕಳಪೆ ಆರಂಭ ಪಡೆಯಿತು. ತಂಡದ ಸ್ಕೋರ್​ 12 ರನ್ ಆಗಿದ್ದಾಗ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಒಂದು ರನ್​ಗಳಿಸಿ ಡಾರ್ಸಿ ಬ್ರೌನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಯಾಸ್ತಿಕಾ ಭಾಟಿಯಾ ಎರಡನೇ ವಿಕೆಟ್‌ಗೆ ರಿಚಾ ಘೋಷ್ ಜೊತೆ 29 ರನ್‌ಗಳ ಜೊತೆಯಾಟವಾಡಿದರು. ರಿಚಾ 20 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 21 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಹರ್ಮನ್‌ಪ್ರೀತ್ ಕೌರ್ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲು ಸಾಧ್ಯವಾಗದೇ ಒಂಬತ್ತು ರನ್ ಗಳಿಸಿ ಪೆವಿಲಿಯನ್ ಸೇರಿದರು.

ಮತ್ತೊಂದೆಡೆ, ಸಮಯೋಚಿತ ಆಟವಾಡುತ್ತಿದ್ದ ಯಾಸ್ತಿಕಾ ಬಾಟಿಯ 49 ರನ್ ಗಳಿಸಿದ್ದಾಗ ವೇರ್ಹ್ಯಾಮ್ ಎಸೆತದಲ್ಲಿ ಕ್ಯಾಚೌಟ್​ ಆಗುವ ಮೂಲಕ ಅರ್ಧಶತಕದಿಂದ ವಂಚಿತರಾದರು. ಈ ವೇಳೆಗೆ 19.5 ಓವರ್​ ಮುಕ್ತಾಯಗೊಂಡಿದ್ದು ಭಾರತ 4 ವಿಕೆಟ್​ ನಷ್ಟಕ್ಕೆ 95 ರನ್​ ದಾಖಲಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಕೌರ್​ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ರೋಡ್ರಿಗಸ್​ ಮತ್ತು ದೀಪ್ತಿ ಶರ್ಮಾ ತಂಡದ ಸ್ಕೋರ್ ಹೆಚ್ಚಿಸಲು ಮುಂದಾದರು. 21 ರನ್ ಗಳಿಸಿದ್ದ ದೀಪ್ತಿ ಕ್ಯಾಚೌಟ್​ ಆಗಿ ಪೆವಿಲಿಯನ್​ಗೆ ಮರಳಿದರು. ಮತ್ತೊಂದೆಡೆ, ಕ್ರೀಸ್​ ಕಚ್ಚಿ ನಿಂತ ಜೆಮಿಮಾ ರೋಡ್ರಿಗಸ್ ಭರ್ಜರಿ ಬ್ಯಾಟಿಂಗ್​ ಮಾಡಿ 77 ಎಸೆತಗಳಲ್ಲಿ 82 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿ, ಗಾರ್ಡನರ್​ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ಈ ಮೂಲಕ ಶತಕವಂಚಿತರಾದರು. ಉಳಿದಂತೆ, ಅಮನ್ಜೋತ್ ಕೌನ್ 20 ರನ್ ಮತ್ತು ಸ್ನೇಹ್ ರಾಣಾ ಒಂದು ರನ್ ಕೊಡುಗೆ ನೀಡಿದರು. ಕೊನೆಯಲ್ಲಿ, ಪೂಜಾ ವಸ್ತ್ರಾಕರ್ ಬಿರುಸಿನ ಬ್ಯಾಟಿಂಗ್​ ಮೂಲಕ ಅತ್ಯುತ್ತಮ ಅರ್ಧಶತಕ ಬಾರಿಸಿ ಟೀಂ ಇಂಡಿಯಾದ ಸ್ಕೋರ್​ ಹೆಚ್ಚಿಸಿದರು. ಈ ಮೂಲಕ ಭಾರತ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 282 ರನ್​ ಕಲೆಹಾಕಿತು.

ಆಸೀಸ್​ ಪರ ಆಶ್ಲೇ ಗಾರ್ಡ್ನರ್, ಜಾರ್ಜಿಯಾ ವೇರ್‌ಹ್ಯಾಮ್ ತಲಾ ಎರಡು ವಿಕೆಟ್​, ಡಾರ್ಸಿ ಬ್ರೌನ್, ಮೇಗನ್ ಸ್ಕಟ್​, ಅನ್ನಾಬೆಲ್ ಸದರ್‌ಲ್ಯಾಂಡ್, ಅಲಾನಾ ಕಿಂಗ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ:ರಣಜಿ ಟ್ರೋಫಿಯ ಆರಂಭಿಕ ಎರಡು ಪಂದ್ಯಗಳಿಗೆ ಕರ್ನಾಟಕ ತಂಡ ಪ್ರಕಟ

Last Updated : Dec 28, 2023, 9:32 PM IST

ABOUT THE AUTHOR

...view details