ನವದೆಹಲಿ: ಮುಂದಿನ ತಿಂಗಳು ಟಿ-20 ತಂಡದ ನಾಯಕತ್ವ ತ್ಯಜಿಸಲು ಕೊಹ್ಲಿ ನಿರ್ಧರಿಸಿದ್ದು, ಈ ಕುರಿತು ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಆದರೆ, ಟಿ-20 ತಂಡಕ್ಕೆ ಮುಂದಿನ ಸಾರಥಿ ಚರ್ಚೆಯಾದರೆ ಇತ್ತ ಏಕದಿನ ತಂಡದ ಮುಂದಿನ ಸವಾಲುಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ಕೊಹ್ಲಿ ಟಿ -20 ಆವೃತ್ತಿ ಹೊರತುಪಡಿಸಿ ಉಳಿದೆರಡು ಫಾರ್ಮ್ಯಾಟ್‌ಗಳಲ್ಲಿ ಕ್ಯಾಪ್ಟನ್ ಆಗಿ ಉಳಿಯಲಿದ್ದಾರೆ. ಆದರೆ, 2023 ರಂದು ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಕೊಹ್ಲಿ ನಾಯಕತ್ವದಲ್ಲೇ ಭಾರತ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಸಹ ಹುಟ್ಟುಕೊಂಡಿದೆ.
2023ರ ವರೆಗಿನ ಭಾರತ ತಂಡದ ಪ್ರವಾಸ ಗಮನಿಸಿದರೆ ಒಟ್ಟು 20 ದ್ವಿಪಕ್ಷೀಯ ಟಿ-20 ಪಂದ್ಯವಾಡಲಿದೆ. ಆದೆ ಇದ್ಯಾವುದಕ್ಕೂ ಕೊಹ್ಲಿ ನಾಯಕತ್ವ ಇರುವುದಿಲ್ಲ. ಯುಎಇ ಟಿ-20 ವಿಶ್ವಕಪ್ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದರೆ ಬಿಸಿಸಿಐ ಕೊಹ್ಲಿ ನಾಯಕತ್ವ ಬದಲಿಸುವ ಸಾಧ್ಯತೆ ಇತ್ತು. ಇದು ವಿರಾಟ್ ಕೊಹ್ಲಿಗೂ ಸಹ ತಿಳಿದ ವಿಚಾರವೇ ಆಗಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ಕೊಹ್ಲಿ ನಾಯಕತ್ವ ಬದಲಾದರೂ ಅಚ್ಚರಿ ಇಲ್ಲ
ಆದರೆ, ಬಿಸಿಸಿಐ ಮುಂದೊಂದು ದಿನ 50 ಓವರ್ಗಳ ಪಂದ್ಯಕ್ಕೆ ಕೊಹ್ಲಿಯವರ ನಾಯಕತ್ವ ಬದಲಿಸಿದರೆ ಅಚ್ಚರಿಯೇನಿಲ್ಲ. ಆದರೆ ಟಿ-20 ತಂಡವನ್ನ ವಿರಾಟ್ ಬಳಿಕ ರೋಹಿತ್ ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡವನ್ನ ಹಲವು ಬಾರಿ ದಡ ಸೇರಿಸಿರುವ ಅವರು ಯುವಪಡೆಯನ್ನ ಮುನ್ನಡೆಸಲು ಸಮರ್ಥರು ಎಂಬ ಮಾತು ಕೇಳಿ ಬರುತ್ತಿದೆ.
ಇದಕ್ಕೂ ಮೊದಲು ಹಲವು ಸರಣಿಗಳಲ್ಲಿ ಕೊಹ್ಲಿ ನಾಯಕರಾಗಿ ತೆಗೆದುಕೊಂಡಿದ್ದ ನಿರ್ಧಾರಗಳ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ವರ್ಡ್ ಟೆಸ್ಟ್ ಚಾಂಪಿಯನ್ಶೀಪ್ನ ಫೈನಲ್ನಲ್ಲಿ ಇಬ್ಬರು ಸ್ಪಿನ್ನರ್ಗಳ ಆಡಿಸಿದ್ದು, ಜೊತೆಗೆ 4ನೇ ಕ್ರಮಾಂಕದಲ್ಲಿ ಸೂಕ್ತ ಬ್ಯಾಟ್ಸ್ಮನ್ ಆಡಿಸದೇ ಇದಿದ್ದಕ್ಕೆ ಟೀಕೆ ಎದುರಿಸಿದ್ದರು.
ಬಳಿಕ ಕಳೆದ ಆಂಗ್ಲರ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಆರ್ ಅಶ್ವಿನ್ಗೆ ಅವಕಾಶ ನೀಡದೇ ಇರುವುದಕ್ಕೂ ಟೀಕೆ ಕೇಳಿಬಂದಿತ್ತು. ಅಲ್ಲದೆ ಅತೀ ಕಡಿಮೆ ಮೊತ್ತಕ್ಕೆ ಟೀಂ ಇಂಡಿಯಾ ಆಲ್ಔಟ್ ಆದಾಗಲೂ ಕೊಹ್ಲಿ ನಾಯಕತ್ವದ ವಿರುದ್ಧ ಪ್ರಶ್ನೆ ಎದ್ದಿದ್ದವು.