ಮೆಲ್ಬೋರ್ನ್ (ಅಸ್ಟ್ರೇಲಿಯಾ): ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು "ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲ ಎಂದು ಎನಿಸುವವರೆಗೆ" ವಿಶ್ವದ ಅತಿದೊಡ್ಡ ಕ್ರಿಕೆಟ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ನಿವೃತ್ತಿ ಪಡೆಯುವ ಕೊನೆಯ ದಿನದವರೆಗೂ ಕ್ರಿಕೆಟ್ ಐಪಿಎಲ್ ಆಡುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ನಲ್ಲಿ ಟ್ರೋಫಿ ವಿಜೇತ ಆಸ್ಟ್ರೇಲಿಯಾ ತಂಡದ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಅವರು ಏಕಾಂಗಿಯಾಗಿ ದ್ವಿಶತಕ ದಾಖಲಿಸಿದ್ದು, ತಂಡದ ಸೆಮೀಸ್ ಪ್ರವೇಶಕ್ಕೆ ಪ್ರಮುಖ ಕಾರಣವಾಗಿತ್ತು. 2024ರ ಐಪಿಎಲ್‌ನಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬುಧವಾರ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಸೀಸ್ ಆಟಗಾರ ಮ್ಯಾಕ್ಸ್‌ವೆಲ್, "ಐಪಿಎಲ್ ಬಹುಶಃ ನಾನು ಆಡುವ ಕೊನೆಯ ಪಂದ್ಯಾವಳಿಯಾಗಿರಬಹುದು. ಏಕೆಂದರೆ ನಾನು ಇನ್ನು ಮುಂದೆ ನಡೆಯಲು ಸಾಧ್ಯವಾಗದವರೆಗೆ ಐಪಿಎಲ್ ಆಡುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
"ನನ್ನ ವೃತ್ತಿಜೀವನದುದ್ದಕ್ಕೂ ಐಪಿಎಲ್ ನನಗೆ ಬಹಳಷ್ಟು ಉತ್ತಮವಾದದ್ದನ್ನು ನೀಡಿದೆ. ನಾನು ಭೇಟಿಯಾದ ಜನರು, ನನಗೆ ತರಬೇತಿ ನೀಡಿದ ಕೋಚ್ಗಳು, ಅಲ್ಲಿ ಅನುಭವಿ ಆಟಗಾರರೊಂದಿಗೆ ಆಡಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸಿಗುವ ಕ್ಷಣ ಎಲ್ಲವೂ ಉತ್ತಮವಾಗಿದೆ. ಆ ಪಂದ್ಯಾವಳಿಯು ನನ್ನ ಇಡೀ ವೃತ್ತಿ ಜೀವನಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದರ ಕುರಿತು ನಾನು ಹಲವು ಬಾರಿ ಮಾತನಾಡಿದ್ದೇನೆ. ಎರಡು ತಿಂಗಳ ಕಾಲ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಆಡುವ ಅವಕಾಶ, ಅಲ್ಲದೇ ಅವರ ಆಟವನ್ನು ಹತ್ತಿರದಿಂದ ನೋಡುವುದು, ಇತರರ ಆಟದಿಂದ ಕಲಿಯುವುದು. ಇದು ಯಾವುದೇ ಆಟಗಾರನ ಕಲಿಕೆಯ ಶ್ರೇಷ್ಠ ಅನುಭವವಾಗಿದೆ" ಎಂದು ಹೇಳಿದ್ದಾರೆ.
2024ರ ಜೂನ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾದ ಕ್ರಿಕೆಟಿಗರು ಅನುಭವಕ್ಕಾಗಿ ಐಪಿಎಲ್‌ನಲ್ಲಿ ಆಡಬೇಕು ಎಂದು ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ. "ಬಹಳಷ್ಟು ಆಸ್ಟ್ರೇಲಿಯನ್ ಆಟಗಾರರು ಐಪಿಎಲ್‌ಗೆ ಹೋಗಬಹುದು. ಏಕೆಂದರೆ ವೆಸ್ಟ್ ಇಂಡೀಸ್‌ಗೆ ಸ್ವಲ್ಪ ಸಮಾನವಾದ ಪರಿಸ್ಥಿತಿಗಳಲ್ಲಿ ಆಡಲು ಅವಕಾಶ ಸಿಗುತ್ತದೆ. ಅಲ್ಲಿ ಸ್ವಲ್ಪ ಒಣಗಿದ ಮತ್ತು ತಿರುಗುವ ಪಿಚ್ಗಳಿರುವುದರಿಂದ ಕಲಿಕೆಗೆ ಸಹಕಾರಿ" ಎಂದರು.
ಭಾರತದಲ್ಲಿ ತವರಿನ ಗೆಲ್ಲುವ ಫೇವ್ರೇಟ್ ತಂಡವನ್ನು ಮಣಿಸಿ ಏಕದಿನ ವಿಶ್ವಕಪ್ ಗೆದ್ದ ನಂತರ ಆಸ್ಟ್ರೇಲಿಯಾ ಆಟಗಾರರು ಮುಂದಿನ ಗುರಿ ಬಗ್ಗೆ ಚಿಂತಿಸಿದ್ದು, 2021ರ ನಂತರ ಮತ್ತೆ ಟಿ20 ವಿಶ್ವಕಪ್ನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿರುವುದಾಗಿ ಮ್ಯಾಕ್ಸ್‌ವೆಲ್ ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ:ಚೆಂಡನ್ನು ಕೈಯಿಂದ ತಳ್ಳಿ ಫೀಲ್ಡಿಂಗ್‌ಗೆ ಅಡ್ಡಿ: ಬಾಂಗ್ಲಾ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಔಟ್